

ಮೈಸೂರು: ತಂತ್ರಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಿ ಮತ್ತು ನಿಮ್ಮನ್ನು ಉತ್ತಮಗೊಳಿಸಿಕೊಳ್ಳಿ ಎಂದು ಎಚ್‌ಸಿಜಿ-ಬಿಎಚ್‌ಐಒ ಆಸ್ಪತ್ರೆಗಳ ಸಂಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಹಾಗೂ ಅಂತರಧ್ವನಿ ಸಂಸ್ಥಾಪಕ ಡಾ.ಬಿ.ಎಸ್.ಅಜಯಕುಮಾರ್ ಹೇಳಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅಂತರಧ್ವನಿ ಸಂಸ್ಥೆ, ಸ್ವತಂತ್ರ ಚಿಂತಕರ ಚಾವಡಿಯಿಂದ ಶನಿವಾರ ಆಯೋಜಿಸಿದ್ದ ದಿನವಿಡೀ ನಾಯಕತ್ವ ಸಮಾವೇಶಕ್ಕೆ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬದುಕಿನಲ್ಲಿ ಸಾಧನೆ ಮಾಡಲು ಸಂಪೂರ್ಣ ಪರಿಶ್ರಮ ಮತ್ತು ದೃಢಸಂಕಲ್ಪ ಬೇಕು. ಇವೆರಡು ನಿಮ್ಮನ್ನು ನಾಯಕರಾಗಿ ರೂಪಿಸುತ್ತದೆ. ಕನಸುಗಳನ್ನು ಬಿಟ್ಟುಕೊಡಬೇಡಿ, ನಿಮ್ಮೊಳಗಿನ ಪ್ರಜ್ಞೆಯನ್ನು ಸದಾ ಜೀವಂತವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ನಿಮ್ಮ ಆತ್ಮಸಾಕ್ಷಿಯನ್ನು ಆಲಿಸಿ ಮತ್ತು ನಿಮ್ಮ ಸ್ವತಂತ್ರ ಚಿಂತನೆಯನ್ನು ಕಳೆದುಕೊಳ್ಳಬೇಡಿ. ಇದರ ಹೊರತಾಗಿ ನಿಮ್ಮ ವೈಫಲ್ಯವನ್ನು ಅನುಭವಿಸಿ, ಅದು ನಿಮ್ಮ ಜೀವನವನ್ನು ಕಲಿಸುತ್ತದೆ. ಯುವಕರು ಯಾವುದೇ ವ್ಯಕ್ತಿಯ ಕುರುಡು ಅನುಯಾಯಿಗಳಾಗಬಾರದು ಎಂದು ಕರೆ ನೀಡಿದ ಅವರು, ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಲೋಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಲಿತ ವಿಷಯಗಳ ಬಗ್ಗೆ ಸಂದೇಶವನ್ನು ರವಾನಿಸುವಂತೆ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಸುತ್ತೂರು ಮಾಲಿನಿ ಮಾತನಾಡಿ, ತಮ್ಮ ಸ್ವಂತ ಹೋರಾಟ ಮತ್ತು ಅಡೆತಡೆಗಳಿಂದ ಎದ್ದು ಬಂದ ಕಥೆಯನ್ನು ಉಲ್ಲೇಖಿಸಿದರು.
ವಿದ್ಯಾರ್ಥಿಗಳು ಯಾವುದಕ್ಕೂ ಭಯ ಪಡಬೇಡಿ ಮತ್ತು ಅವರ ಸವಾಲುಗಳಿಗೆ ಹೋರಾಡುವಂತೆ ಅವರು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಇರಬೇಕು. ಜತೆಗೆ ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು ಎಂದರು.
ಗ್ರಾಮೀಣ ನಾಯಕರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸ್ವತಂತ್ರ ಚಿಂತಕರ ಚಾವಡಿ ಅಂತರಧ್ವನಿಯಿಂದ ಮೈಸೂರಿನಲ್ಲಿ ನಡೆಯುತ್ತಿರುವ ಎರಡನೇ ನಾಯಕತ್ವ ಸಮಾವೇಶ ಇದಾಗಿದೆ.
ಐಎಚ್‌ಡಿಯುಎ ಸಿಇಒ ಎನ್. ಮಧು ಅವರು ಗುಂಡ್ಲುಪೇಟೆ ಮತ್ತು ಸುತ್ತಮುತ್ತಲಿನ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಸ್ಥೆ ಕೈಗೊಂಡಿರುವ ಸಾಮಾಜಿಕ ಕಾರ್ಯವನ್ನು ವಿವರಿಸಿದರು. ಅಂತರಧ್ವನಿ ಸಂಸ್ಥೆಯ ಸೀತಾಲಕ್ಷ್ಮೀ, ವಿಶುಲ್ ಪೌಲ್, ರಾಹುಲ್ ಇದ್ದರು.