

ಚಿತ್ರದುರ್ಗ: ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಪ್ರಧಾನ ಅಂಚೆ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು.
ಕೃಷ್ಣರಾಜಸಾಗರ ಜಲಾಶಯದಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ಅಡಿ ನೀರು. ಅದರಲ್ಲಿ ಬಳಕೆಗೆ ಸಿಗುವುದು ಕೇವಲ 15 ಟಿಎಂಸಿ ಅಡಿ ಮಾತ್ರ. ಹೀಗಿರುವಾಗ 7 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರಿನ ಜನತೆ ಕುಡಿಯಲು ಪ್ರತಿ ತಿಂಗಳು 1.5 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಕಾವೇರಿ ಕಣಿವೆಯ ರೈತರ ಹೊಲ-ಗದ್ದೆಗಳಿಗೆ, ಕೈಗಾರಿಕೆಗಳಿಗೆ ಪೂರೈಸಲು ನೀರಿಲ್ಲ. ಮಂಡ್ಯ ಭಾಗದ ರೈತರು ನೀರಿಲ್ಲದೆ, ತೊಂದರೆಗೆ ಸಿಲುಕಿದ್ದಾರೆ. ಕೋಟ್ಯಂತರ ಜನರ ಜೀವ ಮತ್ತು ಜೀವನದ ಪ್ರಶ್ನೆಯಾಗಿದ್ದು, ಪ್ರಾಧಿಕಾರದ ಆದೇಶ ರಾಜ್ಯ ಸರ್ಕಾರ ಪಾಲಿಸಬಾರದು. ಆ ನಿಟ್ಟಿನಲ್ಲಿ ದೃಢ ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾವೇರಿ ನೀರಿಗಾಗಿ ರಾಜ್ಯದ ಎಲ್ಲ ಸಂಸದರು, ಶಾಸಕರು ದೆಹಲಿಯಲ್ಲಿ ಧರಣಿ ನಡೆಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯಕ್ಕೆ ನ್ಯಾಯ ಸಿಗದಿದ್ದರೆ ರಾಜೀನಾಮೆ ನೀಡಲು ಸಿದ್ಧರಾಗಿರಬೇಕು ಎಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್, ಪದಾಧಿಕಾರಿಗಳಾದ ಎಸ್.ಪಿ.ಗಣೇಶ್, ಜಿ.ರಾಜಪ್ಪ, ವಿಜಯಕುಮಾರ್, ಟಿ.ಕೆ.ಶಿವಮೂರ್ತಿ, ಆರ್.ಜಿ.ಲಕ್ಷ್ಮಣ, ಟಿ.ವೆಂಕಟೇಶ್, ಪ್ರಸಾದ್ ಮಲ್ಲ, ವಸಂತ್, ವೆಂಕಟೇಶ್, ರಾಮಕೃಷ್ಣಪ್ಪ, ಗೋ ಬಸವರಾಜನ್, ದಾದಾಪೀರ್, ಜಾಕೀರ್, ಉದಯಶಂಕರ್ ಇತರರಿದ್ದರು.