ನಾಲಿಗೆ ಮೇಲೆ ಹಿಡಿತವಿರಲಿ

abbayya prasad
Published on

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವ ಸಂಸದ ಅನಂತಕುಮಾರ ಹೆಗಡೆ ನಾಲಿಗೆ ಬಿಗಿ ಹಿಡಿತ ಇಟ್ಟುಕೊಳ್ಳಲಿ. ಇಲ್ಲದಿದ್ದರೆ ನಾಡಿನ ಜನ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾಲ್ಕು ವರ್ಷದಿಂದ ಅನಂತಕುಮಾರ ಹೆಗಡೆ ಮಲಗಿಕೊಂಡಿದ್ದರು. ಈಗ ಸುದ್ದಿಯಾಗಬೇಕು ಎಂಬ ಕಾರಣಕ್ಕೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಡು ಕಂಡ ಉತ್ತಮ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರು. ಅಂಥ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ತರವಲ್ಲ ಎಂದು ಜರಿದಿದ್ದಾರೆ.

ಪ್ರಚಾರದ ಹಪಾಹಪಿ, ರಾಜಕೀಯ ದುರುದ್ದೇಶಕ್ಕಾಗಿ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಅಸಾಂವಿಧಾನಿಕ ಪದ ಬಳಕೆ ಮಾಡುವುದನ್ನು ಗಮನಿಸಿದರೇ ಇವರ ಸಂಸ್ಕೃತಿ ಎಂಥದ್ದು ಎಂಬುದನ್ನು ಬಿಂಬಿಸುತ್ತದೆ. ತಮ್ಮದು ಶಿಸ್ತಿನ ಪಕ್ಷ ಎಂದು ಬೊಬ್ಬೆ ಹೊಡೆಯುವ ಬಿಜೆಪಿಗರ ಸಂಸ್ಕೃತಿ ಇದೇ ಇರಬಹುದು ಎಂದು ಸಂಶಯ ಮೂಡುತ್ತದೆ. ಇಂಥವರಿಂದ ಕೋಮು ಗಲಭೆ ಬಿಟ್ಟು ಏನನ್ನೂ ಬಯಸಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ.

ಇದು ಕೇವಲ ಸಂಸದ ಅನಂತಕುಮಾರ ಹೆಗಡೆ ಅವರ ಮಾತುಗಳಲ್ಲ. ಇವರ ಮಾತಿನಲ್ಲಿ ಇಡೀ ಬಿಜೆಪಿ ಪಕ್ಷದ ಮನಸ್ಥಿತಿ ಅಡಗಿದೆ. ಈ ಹಿಂದೆ ಇವರು ಸಂವಿಧಾನ ಬದಲಿಸುವುದಾಗಿ ಹೇಳುವ ಮೂಲಕ ಬಿಜೆಪಿಯ ಮೂಲ ಉದ್ದೇಶವನ್ನು ಬಹಿರಂಗ ಪಡಿಸಿದ್ದು ಜಗಜ್ಜಾಹೀರಾಗಿದೆ. ಇವರ ಕೀಳು ಮನಸ್ಥಿತಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರೇ ಉತ್ತರ ನೀಡಲಿದ್ದಾರೆ. ಅನಂತಕುಮಾರ ಹೆಗಡೆ ಹೇಳಿಕೆಗಳನ್ನು ನೀಡುವುದನ್ನು ಹೀಗೆ ಮುಂದುವರೆಸಿದರೆ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net