ಟಿವಿ, ಮೊಬೈಲ್‌ನಿಂದ ಮಕ್ಕಳು ದೂರವಿರಲಿ

ಪಿರಿಯಾಪಟ್ಟಣ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಮಾಗಳಿ ಗ್ರಾಮದ ಜ್ಞಾನಗಂಗಾ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲಾ ವಾರ್ಷಿಕೋತ್ಸವವನ್ನು ಅನಿಕೇತನ ಪಿಯು ಕಾಲೇಜು ಕಾರ್ಯದರ್ಶಿ ಡಾ.ಜೆ.ಸೋಮಣ್ಣ ಉದ್ಘಾಟಿಸಿದರು. ಬಿ.ಎಂ. ಶಿವಸ್ವಾಮಿ, ಬಿ.ಶಿವರಾಜ್, ಭಾಸ್ಕರ್, ನಂಜುಂಡಸ್ವಾಮಿ ಇತರರಿದ್ದರು.
ಪಿರಿಯಾಪಟ್ಟಣ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಮಾಗಳಿ ಗ್ರಾಮದ ಜ್ಞಾನಗಂಗಾ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲಾ ವಾರ್ಷಿಕೋತ್ಸವವನ್ನು ಅನಿಕೇತನ ಪಿಯು ಕಾಲೇಜು ಕಾರ್ಯದರ್ಶಿ ಡಾ.ಜೆ.ಸೋಮಣ್ಣ ಉದ್ಘಾಟಿಸಿದರು. ಬಿ.ಎಂ. ಶಿವಸ್ವಾಮಿ, ಬಿ.ಶಿವರಾಜ್, ಭಾಸ್ಕರ್, ನಂಜುಂಡಸ್ವಾಮಿ ಇತರರಿದ್ದರು.
Published on

ಬೈಲಕುಪ್ಪೆ: ಪಾಲಕರು ಮಕ್ಕಳನ್ನು ಟಿವಿ ಮತ್ತು ಮೊಬೈಲ್ ಫೋನ್‌ಗಳಿಂದ ದೂರವಿರಿಸಬೇಕು ಎಂದು ಅನಿಕೇತನ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಡಾ.ಜೆ.ಸೋಮಣ್ಣ ಸಲಹೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ ಮಾಗಳಿ ಗ್ರಾಮದ ಜ್ಞಾನಗಂಗಾ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಸುಲಭವಾಗಿ ಮೊಬೈಲ್ ಫೋನ್ ಸಿಗುತ್ತಿರುವ ಪರಿಣಾಮ ಮಕ್ಕಳಲ್ಲಿ ಸೃಜನಾತ್ಮಕತೆ ಕ್ಷೀಣಿಸುತ್ತಿದ್ದು, ಪ್ರತಿಭೆ ಅರಳಲು ತೊಡಕಾಗಿದೆ. ಆದ್ದರಿಂದ ಪಾಲಕರು ಎಚ್ಚರ ವಹಿಸಬೇಕು ಎಂದು ಹೇಳಿದರು.

ಮಕ್ಕಳು ದಿನದ ಬಹುತೇಕ ಸಮಯವನ್ನು ಮೊಬೈಲ್ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೇ ಮುಳುಗುತ್ತಿರುವ ಪರಿಣಾಮ ವಿದ್ಯಾರ್ಥಿಗಳಲ್ಲಿ ಚಿಂತಿತಾ ಸಾಮರ್ಥ್ಯ ಕುಸಿಯುತ್ತಿದೆ. ಅಲ್ಲದೆ ಎಲ್ಲದಕ್ಕೂ ಮೊಬೈಲ್ ಅವಲಂಬನೆ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಕ್ಷೀಣಿಸಲು ಕಾರಣವಾಗುತ್ತಿದೆ ಎಂದರು.

ಮಕ್ಕಳಿಗೆ ಎಳವೆಯಲ್ಲೇ ಮಾನವೀಯ ಮೌಲ್ಯಗಳನ್ನು ತುಂಬುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಇಲ್ಲದಿದ್ದರೆ ಅವರು ಸಮಾಜಕ್ಕೆ ಹೊರೆಯಾಗಿ ಪರಿಣಮಿಸುತ್ತಾರೆ ಎಂದು ಎಚ್ಚರಿಸಿದರು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಿ.ಶಿವರಾಜ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಶಾಲಾ ಹಂತದಲ್ಲಿ ಪ್ರತಿಭಾ ಪುರಸ್ಕಾರದಂತಹ ಪಠ್ಯೇತರ ಚಟುವಟಿಕೆಗಳನ್ನು ನಡೆಸಬೇಕು. ಇದು ಮಕ್ಕಳಲ್ಲಿ ಇರುವ ಸ್ಪರ್ಧಾ ಮನೋಭಾವ ಹೊರತೆಗೆಯಲು ಸಹಕಾರಿಯಾಗಲಿದೆ ಎಂದರು.

ನಿವೃತ್ತ ಉಪನ್ಯಾಸಕ ಬಿ.ಎಂ.ಶಿವಸ್ವಾಮಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಕಲಿಸುವುದರ ಜತೆಗೆ ತಾವು ಕೂಡ ಕಲಿಯಬೇಕು. ಆಗ ಮಾತ್ರ ಅವರು ಉತ್ತಮ ಶಿಕ್ಷಕರಾಗಲು ಸಾಧ್ಯ. ಕಾಲ ಬದಲಾದಂತೆ ಶೈಕ್ಷಣಿಕ ವ್ಯವಸ್ಥೆ ಕೂಡ ಬದಲಾಗುತ್ತಿದ್ದು, ಇದಕ್ಕೆ ತಕ್ಕಂತೆ ಶಿಕ್ಷಕರು ಸಹ ಕಲಿಯುತ್ತಿರಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ನೀತಿ ಮೇಲಿಂದ ಮೇಲೆ ಬದಲಾಗಬಾರದು. ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಕರು ಬೋಧಿಸುವ ಕ್ರಮ ಮಕ್ಕಳನ್ನು ಶಿಕ್ಷಣಕ್ಕೆ ಸೆಳೆಯುವಂತಿರಬೇಕು. ಶಿಕ್ಷಣ ಪಡೆಯುವ ಮಕ್ಕಳು ತಪ್ಪು ಮಾಡಿದರೆ ಅವರನ್ನು ತಿದ್ದಲು ಶಿಕ್ಷೆಗೂ ಅವಕಾಶ ಇದೆ. ಆದರೆ ಕಾಲಕ್ರಮೇಣ ಶಿಕ್ಷೆ ನೀಡುವುದು ಒಂದು ಅಪರಾಧ ಎಂದು ಪರಿಗಣಿಸಿದಾಗ ಶಿಕ್ಷಕರು ಮಕ್ಕಳಿಗೆ ತಮ್ಮ ಕ್ರಿಯಾಶೀಲತೆಯಿಂದಲೇ ಗಮನ ಸೆಳೆದು ಜ್ಞಾನದ ಬೀಜವನ್ನು ಅವರು ತಲೆಯಲ್ಲಿ ಬಿತ್ತಬೇಕಾಗುತ್ತದೆ ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೆಕ್ಯಾ ಸತೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಎನ್.ನಂಜುಂಡಸ್ವಾಮಿ, ಬಿಐಆರ್‌ಟಿ ಭಾಸ್ಕರ್, ಗ್ರಾಪಂ ಸದಸ್ಯರಾದ ನಂದೀಶ್, ಡಿಎಸ್ ಜ್ಯೋತಿ, ಜ್ಞಾನಗಂಗಾ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಕೃಷ್ಣ ಎನ್.ಪಿ.ಹರೀಶ್, ಪಿ.ಎನ್.ದೇವೇಗೌಡ, ರಾಮೇಗೌಡ, ಕಾಂಗ್ರೆಸ್ ಮುಂಖಡರಾದ ನಾಸೀರ್ ಅಹಮದ್, ಶೇಕ್ ಇಬ್ರಾಹಿಂ, ಶಿಕ್ಷಕರಾದ ಆಶಾ ಬಿ.ಆರ್, ಪ್ರಮೀಳಾ, ಜಮುನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net