

ಗಲಗಲಿ : ಮಕ್ಕಳು ಮೊಬೈಲ್‌ನಿಂದ ದೂರವಿದ್ದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದರೊಂದಿಗೆ ಉತ್ತಮ ಸಂಸ್ಕಾರಯುತ ಸತ್ಪ್ರಜೆಗಳಾಗಲು ಪ್ರಯತ್ನ ಮಾಡಬೇಕಾಗಿದೆ ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಎಚ್.ವೈ. ಜಿರಾಳಿ ಅಭಿಪ್ರಾಯಪಟ್ಟರು.
ಗಲಗಲಿಯ ಗಾಲವ ಶಿಕ್ಷಣ ಸಂಸ್ಥೆ ಸಭಾ ಭವನದಲ್ಲಿ ಆಯೋಜಿಸಿದ್ದ ಎಂಟನೇ ತರಗತಿಯ ಮಕ್ಕಳ ಸ್ವಾಗತ ಹಾಗೂ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ತಕ್ಷಣ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸದೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು. ಅಲ್ಲದೆ ಅವರ ಆಟಪಾಠದ ಬಗ್ಗೆ ತಿಳಿಯಲು ನಿತ್ಯ ಅವರೊಂದಿಗೆ ಕೆಲಸಮಯ ಕಳೆಯಬೇಕು ಎಂದರು.
ಸಂಸ್ಥೆಯ ಪ್ರೌಢಶಾಲೆ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲಗೌಡ ನ್ಯಾಮಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ರಂಗಣ್ಣ ಬಿರಾದಾರ, ಪಾಲಕರ ಪ್ರತಿನಿಧಿ ಆನಂದ ಗಾಣಿಗೇರ, ಶಿಕ್ಷಕ ಎ.ಎಲ್. ಡಬ್ಬಿ, ಕೆ.ಜಿ. ಮುದ್ದಾಪುರ ಇದ್ದರು.