

ಬೇಲೂರು: ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒತ್ತುಕೊಡಬೇಕು. ಜತೆಗೆ ಪಾಲಕರು ಸಹ ಮಕ್ಕಳನ್ನು ಟಿವಿ, ಮೊಬೈಲ್‌ಗಳಿಂದ ದೂರವಿಡಬೇಕಿದೆ ಎಂದು ದಿವ್ಯ ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಹೇಳಿದರು.
ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ಆಯೋಜಿಸಿದ್ದ ದಿವ್ಯ ಸಾಂಸ್ಕೃತಿಕ ವೈಭವ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ 35 ವರ್ಷಗಳ ಹಿಂದೆ ಪ್ರಾರಂಭವಾದ ದಿವ್ಯ ಶಿಕ್ಷಣ ಸಂಸ್ಥೆ ಸತತ 26 ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಹೆಗ್ಗಳಿಕೆ ಪಾತ್ರವಾಗಿದೆ. ಇದಕ್ಕೆ ಪ್ರಮುಖ ಕಾರಣ ಪೋಷಕರು ನೀಡಿದ ಸಹಕಾರ ನಾವು ಎಂದಿಗೂ ಮರೆಯುತ್ತಿಲ್ಲ. ಈ ಸಂಸ್ಥೆಗೆ ಹೆಚ್ಚು ಗ್ರಾಮೀಣ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಣದ ಜತೆಗೆ ಇನ್ನಿತರೆ ಚಟವಟಿಕೆಗಳನ್ನು ಕಲಿಸಲಾಗುತ್ತದೆ. ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ತನಕ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆ ಸ್ಥಾಪಿಸುವುದು ಸುಲಭದ ಕೆಲಸವಲ್ಲ. ಶಿಕ್ಷಣ ಸಂಸ್ಥೆಗಳ ಪೈಪೋಟಿ ನಡುವೆಯೂ 35 ವರ್ಷಗಳ ಹಿಂದಿನಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ ಗೌಡೇಗೌಡರು, ಇಂದು ಬೇಲೂರು ತಾಲೂಕಿನಲ್ಲಿ ಪ್ರತಿಷ್ಠಿತ ಶಾಲೆಯನ್ನಾಗಿ ರೂಪಿಸಿದ್ದಾರೆ. ಈ ಶಾಲೆಯಲ್ಲಿ ಪ್ರತಿವರ್ಷ ನಡೆಸುವ ಕೃಷ್ಣ ಜನ್ಮಾಷ್ಠಮಿಯಂದು ಜಾತಿ ಧರ್ಮ ಎನ್ನದೇ ಎಲ್ಲರೂ ಮಕ್ಕಳಿಗೆ ಕೃಷ್ಣ, ರುಕ್ಮಿಣಿಯರ ವೇಷ ಭೂಷಣ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಜತೆಗೆ ಎಲ್ಲ ಕ್ಷೇತ್ರದಲ್ಲೂ ಶಾಲೆ ಮುಂದೆ ಸಾಗುತ್ತಿರುವುದು ಶ್ಲಾಘನೀಯ ಎಂದರು.
ದಿವ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ವನಜಾಕ್ಷಿ ಗೌಡೇಗೌಡ, ನಿರ್ದೇಶಕಿ ದಿವ್ಯಾ ಧರ್ಮಕುಮಾರ್, ಪ್ರೌಢಶಾಲಾ ಮುಖ್ಯಶಿಕ್ಷಕ ಚೇತನ್‌ಕುಮಾರ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಉಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಸುನೀಲ್ ಇತರರಿದ್ದರು.