

ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಸುಂಟಿಕೊಪ್ಪ ವಲಯ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್‌ಕುಮಾರ್, ಶ್ರೀ ಕ್ಷೇತ್ರ ವತಿಯಿಂದ ಶಾಲಾ ಮಕ್ಕಳಿಗೆ ಇದೊಂದು ಅತ್ಯುತ್ತಮ ಕಾರ್ಯಕ್ರಮ. ಮಕ್ಕಳು ಕಾರ್ಯಕ್ರಮದ ಮಹತ್ವ ಅರಿತು ವ್ಯಸನಮುಕ್ತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಡೆನ್ನಿಸ್ ಡಿಸೋಜ ಮಾತನಾಡಿ, ಮದ್ಯವ್ಯಸನ, ಮಾದಕ ವಸ್ತುಗಳ ಸೇವನೆಯಿಂದ ಮಕ್ಕಳು ದೂರವಿರಬೇಕು. ಇದು ಜೀವ ಮತ್ತು ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಬಾರದು. ಬದಲಾಗಿ ಉತ್ತಮ ಜೀವನ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಅಲ್ಲದೆ ಮನೆಯಲ್ಲಿ ಯಾರಾದರೂ ದುಶ್ಚಟಗಳಿಗೆ ದಾಸರಾಗಿದ್ದರೆ ಅವರಿಗೆ ತಿಳಿ ಹೇಳುವ ಕೆಲಸವಾಗಬೇಕು. ಇನ್ನು ಅಂಗಡಿಗಳಲ್ಲಿ ಅಮಲು ಪದಾರ್ಥ ಮಾರಾಟ ಮಾಡುವುದು ತಿಳಿದು ಬಂದಲ್ಲಿ ಮಾಹಿತಿ ನೀಡಬೇಕು. ಮಾಹಿತಿದಾರರ ಗುರುತು ಮತ್ತು ಪರಿಚಯವನ್ನು ಬಹಿರಂಗೊಳಿಸುವುದಿಲ್ಲ ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ನರಸಿಂಹ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಹೇಳಿದರು.
ಡ್ರಗ್ಸ್ ಸೇವನೆಯಿಂದಾಗುವ ಸಮಸ್ಯೆ ಮತ್ತು ಕಾನೂನು ಸಮಸ್ಯೆ ಕುರಿತು ಸುಂಟಿಕೊಪ್ಪ ಠಾಣೆಯ ಸಿಬ್ಬಂದಿ ದಿವ್ಯಾ ಮಾಹಿತಿ ನೀಡಿದರು.
ಕಾಲೇಜು ಪ್ರಾಂಶುಪಾಲೆ ಶ್ರೀಲತಾ ಅಧ್ಯಕ್ಷತೆ ವಹಿಸಿದರು. ಸುಂಟಿಕೊಪ್ಪ ಕಾರ್ಯಕ್ಷೇತ್ರದ ಮೇಲ್ವಿಚಾರಕ ಸಂತೋಷ ಪ್ರಾಸ್ತವಿಕವಾಗಿ ಮಾತಾಡಿದರು. ವೇದಿಕೆಯಲ್ಲಿ ಸ್ವ ಸಹಾಯ ಸಂಘದ ಒಕ್ಕೂಟ ಅಧ್ಯಕ್ಷರಾದ ಶುಭಾ, ಸೇವಾಪ್ರತಿನಿಧಿ ಚಿತ್ರಾ, ಯಶೋದಾ, ನಂದಿನಿ ಇತರರಿದ್ದರು.