ಅಧಿಕಾರದಿಂದ ಕಾಂಗ್ರೆಸ್-ಬಿಜೆಪಿ ದೂರವಿಡಲು ಬಿಎಸ್‍ಪಿ ಸಲಹೆ

BSP Prog.
Published on

ಚಿಕ್ಕಮಗಳೂರು: ರಾಜ್ಯದ ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜನತೆ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿ ಮಾತಿಗೆ ಮರುಳಾಗದೆ ಮುಂದಿನ ಚುನಾವಣೆಯಲ್ಲಿ ಆ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಬಹುಜನ ಸಮಾಜ ಪಕ್ಷದ ಜಿಲ್ಲಾಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರಿಗೆ ಧ್ವನಿಯಾಗಲು ಬಿಎಸ್‍ಪಿ

ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ದಮನಿತರ ಏಳಿಗೆಗೆ ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಹೆಚ್ಚು ಮುಖ್ಯ ಎಂದು ಪ್ರತಿಪಾದಿಸಿದ್ದರು. ಆದರೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದ್ದರೂ ಇದನ್ನು ಸಾಧಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾನ್ಷಿರಾಂ ಮತ್ತು ಮಾಯಾವತಿ ಅಂಬೇಡ್ಕರ್ ಕನಸು ನನಸು ಮಾಡಲು ಈ ಜವಾಬ್ದಾರಿ ತೆಗೆದುಕೊಂಡು ಬಿಎಸ್‍ಪಿ ಪಕ್ಷ ಸ್ಥಾಪಿಸಿ ದಲಿತರಿಗೆ ಧ್ವನಿಯಾಗಲು ನೆರವಾದರು ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಣ, ಹೆಂಡ ಹಂಚಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರುವ ಮೂಲಕ ಕಳೆದ 7 ದಶಕಗಳಲ್ಲಿ ದೇಶವನ್ನು ಲೂಟಿ ಹೊಡೆದಿವೆ. ಇಂತಹ ಅಪ್ರಾಮಾಣಿಕರ ಕೈಯಲ್ಲಿ ಸಿಕ್ಕಿ ರಾಷ್ಟ್ರದ ಸಂವಿಧಾನ ಛಿದ್ರವಾಗಿದೆ ಎಂದು ದೂರಿದರು.

20 ಕೋಟಿ ನಿರುದ್ಯೋಗಿಗಳ ಸೃಷ್ಟಿ

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಿಎಸ್‍ಟಿ, ಲಾಕ್‍ಡೌನ್ ಹೇರುವ ಮೂಲಕ 20 ಕೋಟಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ರಾಷ್ಟ್ರದಲ್ಲಿ ಕೋಮುವಾದ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕ್ಷೀಣಿಸಿ ಪರೋಕ್ಷ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ದೂರಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಕಳೆದ ಏಳು ದಶಕಗಳಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂಬುದರ ಬಗ್ಗೆ ದೇಶದ ಜನತೆ ಚಿಂತನೆ ನಡೆಸಬೇಕು. ಎಲ್ಲರಿಗೂ ಸಮಬಾಳು ಮತ್ತು ಸಮಪಾಲು ಹಾಗೂ ಸಾಮಾಜಿಕ ಪರಿವರ್ತನೆಗೆ ಮುಂದಿನ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಎಸ್‍ಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು.

ಹಸಿವಿನಲ್ಲಿ ಭಾರತ 94ನೇ ಸ್ಥಾನದಲ್ಲಿ

ಪಕ್ಷದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಹಸಿವಿನಿಂದ ಸಾಯುತ್ತಿರುವ ದೇಶಗಳಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಾಕ್‍ಡೌನ್‍ನಿಂದ ಆರ್ಥಿಕವಾಗಿ ತತ್ತರಿಸಿರುವ ಜನತೆಯ ಮೇಲೆ, ತೆರಿಗೆಗಳ ಮೇಲೆ ತೆರಿಗೆ ವಿಧಿಸಿ ಅವರನ್ನು ಜರ್ಝರಿತರನ್ನಾಗಿಸಿದೆ. ಸಾರ್ವಜನಿಕ ಕ್ಷೇತ್ರಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ಸಂವಿಧಾನದಲ್ಲಿರುವ ಅಂಶಗಳನ್ನು ಅನುಷ್ಠಾನಕ್ಕೆ ತರುವ ಸ್ಥಳದಲ್ಲಿ ಕುಳಿತಿರುವವರು ಸಂವಿಧಾನ ವಿರೋಧಿಗಳು. ಹೀಗಾಗಿ ಅವು ಜಾರಿಯಾಗುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಸಂವಿಧಾನ ಯಥಾವತ್ತಾಗಿ ಜಾರಿಯಾಗಬೇಕಾದರೆ ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಎಸ್‍ಪಿ ಅಧಿಕಾರಕ್ಕೆ ಬರಬೇಕು. ಸಾಮಾಜಿಕ ಪರಿವರ್ತನೆ, ಅಭಿವೃದ್ಧಿಯಾಗಬೇಕಿದ್ದರೆ ಬಿಎಸ್‍ಪಿ ನಾಯಕಿ ಮಾಯಾವತಿ ಪ್ರಧಾನಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿದರು. ರಾಜ್ಯ ಉಸ್ತುವಾರಿ ರಮೇಶ್‍ಚಂದ್ರ ಭಾರತಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಾಕೀರ್ ಹುಸೇನ್, ಶಿವಮ್ಮ, ಮುಖಂಡರಾದ ಪಿ.ವೇಲಾಯುಧನ್, ಪಿ.ಪರಮೇಶ್ವರ್, ಬಕ್ಕಿ ಮಂಜುನಾಥ್, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net