ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತವಾಗಿರಿಸಿ- ಸಚಿವ ರಾಮಲಿಂಗಾ ರೆಡ್ಡಿ

Ramalinga Reddy
Published on

ಬೆಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡಿ ಮುಂದಿನ ಯುವ ಪೀಳಿಗೆಗೆ ಉತ್ತಮ ವಾತವರಣ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ನೃಪತುಂಗ ರಸ್ತೆಯಲ್ಲಿರುವ ಯವನಿಕ ಸಭಾಂಗಣದಲ್ಲಿ ಶುಕ್ರವಾರ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಜಲ ಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವೂ ಸಹ ಹೆಚ್ಚುತ್ತಿದೆ. ನಗರೀಕರಣ, ಹೆಚ್ಚುತ್ತಿರುವ ವಾಹನಗಳು, ಜನಸಂಖ್ಯೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ನಾವು ಆದಷ್ಟು ವಿದ್ಯುತ್‌ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.
ಚಲನಚಿತ್ರ ನಟಿ ಐಂದ್ರಿತ ರೈ ಮಾತನಾಡಿ, ದೇಶದಲ್ಲಿ ಮಾಲಿನ್ಯ ಹೊಂದಿದ ನಗರಗಳಲ್ಲಿ ಬೆಂಗಳೂರು ೫ನೇ ಸ್ಥಾನವನ್ನು ಹೊಂದಿದೆ. ದೀಪಾವಳಿಯ ಸಂದರ್ಭದಲ್ಲಿ ಉಂಟಾದ ಶಬ್ದ ಹಾಗೂ ವಾಯುಮಾಲಿನ್ಯದಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದಲ್ಲದೇ, ಪ್ರಾಣಿಗಳಿಗೂ ತೊಂದರೆ ಉಂಟಾಯಿತು. ನಾವು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಲು ರೂಡಿ ಮಾಡಿಕೊಳ್ಳಬೇಕು. ಹಾಗೆಯೇ ಸೈಕ್ಲಿಂಗ್, ವಾಯು ವಿಹಾರ ಮಾಡಿ ದೇಹದ ಸ್ವಾಸ್ಥ್ಯ ಕಾಪಾಡಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರೊ.ಡಾ.ಎಚ್.ಪರಮೇಶ್ ಅವರು ಮಾತನಾಡಿ, ವಾಯುಮಾಲಿನ್ಯ ನಿಧಾನಗತಿಯಲ್ಲಿ ಮನುಷ್ಯನನ್ನು ಕೊಲ್ಲುತ್ತದೆ. ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳು, ಸ್ನಾಯು ಸೆಳೆತ, ಅಸ್ತಮಾ ಕಾಯಿಲೆಗಳು ವಾಯು ಮಾಲಿನ್ಯದಿಂದ ಉಂಟಾಗುತ್ತದೆ. ನಾವು ವ್ಯಾಯಾಮ ಮಾಡುವುದರ ಜತೆಗೆ ಶುದ್ಧ ಆಮ್ಲಜನಕ ಹಾಗೂ ಉತ್ತಮ ಆಹಾರ ಸೇವಿಸಿದರೆ ಆರೋಗ್ಯವನ್ನು ಹೊಂದಬಹುದು ಎಂದರು.
ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಯು ಹೊರತಂದಿರುವ ಹಸಿರಾಗುವ ಉಸಿರಾಗುವ ಮಾಹಿತಿ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಾಸಾಚರಣೆ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಕಾರ್ಯದರ್ಶಿ ಎ.ಎಂ ಯೋಗೀಶ್, ಸಾರಿಗೆ ಹೆಚ್ಚುವರಿ ಆಯುಕ್ತರಾದ ಬಿ.ಪಿ. ಉಮಾಶಂಕರ್, ಜೆ. ಜ್ಞಾನೇಂದ್ರ ಕುಮಾರ್, ಜೆ. ಪುರುಷೋತ್ತಮ್, ಸಿ.ಮಲ್ಲಿಕಾರ್ಜುನ್, ಜಂಟಿ ಸಾರಿಗೆ ಆಯುಕ್ತರಾದ ಎಂ. ಶೋಭ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net