

ಚಿತ್ರದುರ್ಗ: ಸಂಘಟಿತ ಸೇರಿ ಎಲ್ಲ ಅಪರಾಧ ಕೃತ್ಯಗಳಿಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗೂರಾಗಿ ಇರುವಂತೆ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಮುರುಗನ್ ತಾಕೀತು ಮಾಡಿದರು.’
ಎಸ್‌ಪಿ ಕಚೇರಿಯಲ್ಲಿ ಬುಧವಾರ ಅಪರಾಧ ಪ್ರಕರಣಗಳ ಪ್ರಗತಿ ಪರಿಶೀಲಿಸಿದ ಅವರು, ಜೂಜಾಟ, ಅನೈತಿಕ ಚಟುವಟಿಕೆಗಳಂಥ ಸಂಘಟಿತ ಅಪರಾಧ ಕೃತ್ಯಗಳೆಡೆ ವಿಶೇಷ ನಿಗಾದ ಅಗತ್ಯವಿದೆ. ಯಾವುದೇ ಅಪರಾಧ ಪ್ರಕರಣಗಳಿರಲಿ ಕೂಡಲೇ ತನಿಖೆ ನಡೆಸಿ ಸೂಕ್ತ ಸಾಕ್ಷಾೃಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಬೇಕು. ಬಾಕಿ ಇರುವಂಥ ಪ್ರಕರಣಗಳ ಇತ್ಯರ್ಥಕ್ಕೂ ಮುತುವರ್ಜಿ ವಹಿಸಬೇಕು ಎಂದರು.
ಠಾಣಾ ಆವರಣಗಳಲ್ಲಿ ಇರುವಂಥ ವಶಪಡಿಸಿಕೊಂಡ ವಾಹನಗಳ ವಿಲೇವಾರಿಗೂ ಕ್ರಮ ತೆಗೆದುಕೊಳ್ಳ ಬೇಕೆಂದು ಠಾಣಾಧಿಕಾರಿಗಳಿಗೆ ಸೂಚಿಸಿದರು.
ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತಂದರೆ, ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಠಾಣೆಗೆ ದೂರು ಹೊತ್ತು ಬರುವಂಥ ನಾಗರಿಕರೊಂದಿಗೆ ತಮ್ಮ ನಡೆ ಸೌಹಾರ್ದವಾಗಿರಲಿ. ಪೊಲೀಸರ ಬಗ್ಗೆ ಜನರಲ್ಲಿ ಗೌರವ ಹೆಚ್ಚಿಸುವಂಥ ಕೆಲಸ ನಿಮ್ಮಿಂದಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗ್ಗೆ ಪೊಲೀಸ್ ಪರೇಡ್ ವೀಕ್ಷಣೆ ನಡೆಸಿದ ಮುರುಗನ್, ಬಳಿಕ ನಗರದ ಪೊಲೀಸ್ ವಸತಿಗೃಹಕ್ಕೆ ಭೇಟಿ ನೀಡಿ, ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರ ಅಹವಾಲು ಆಲಿಸಿದರು.
ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಆವರಣದಲ್ಲಿ ಇಲಾಖೆ ವಾಹನಗಳು ಹಾಗೂ ಕಚೇರಿಯಲ್ಲಿ ವಿವಿಧ ಶಸ್ತಾಸ್ತ್ರಗಳನ್ನು ಪರಿಶೀಲಿಸಿದರು. ಶಸ್ತಾಸ್ತ್ರಗಳ ನಿರ್ವಹಣೆ ಕುರಿತಂತೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಎಲ್ಲ ಶಸ್ತಾಸ್ತ್ರಗಳ ಬಳಕೆ ಕುರಿತಂತೆ ಸಂಬಂಧಿಸಿದವರಿಗೆ ಮಾಹಿತಿ, ತರಬೇತಿ ಇರಬೇಕು. ಇಲ್ಲವಾದಲ್ಲಿ ತುರ್ತು ಸಂದರ್ಭದಲ್ಲಿ ಗೊಂದಲದ ಅಪಾಯವಿದೆ ಎಂದು ಎಚ್ಚರಿಸಿದರು.
ಎಸ್‌ಪಿ ಧರ್ಮೇಂದ್ರಕುಮಾರ್ ಮೀನಾ, ಎಎಸ್‌ಪಿ ಕುಮಾರಸ್ವಾಮಿ ಇತರರಿದ್ದರು.