

ಕಂಪ್ಲಿ: ಆರೋಗ್ಯವಂತ ಮಕ್ಕಳಿಂದ ಸ್ವಸ್ಥ ದೇಶ ನಿರ್ಮಾಣ ಸಾಧ್ಯ. ಮಕ್ಕಳ ಆರೋಗ್ಯ ಸಂರಕ್ಷಿಸುವಲ್ಲಿ ತಾಯಂದಿರು ಪೂರ್ಣ ನಿಗಾವಹಿಸಬೇಕು ಎಂದು ತಹಸೀಲ್ದಾರ್ ಗೌಸಿಯಾ ಬೇಗಂ ಹೇಳಿದರು.
ಇಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಪೌಷ್ಟಿಕ ಮಕ್ಕಳ ಆರೈಕೆಗಾಗಿ ಬಾಲಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮನೆಯಲ್ಲಿಯೇ ಪೌಷ್ಟಿಕಾಂಶವುಳ್ಳ ಆಹಾರ ತಯಾರಿಸಿ ನೀಡಬೇಕು. ಪೌಷ್ಟಿಕಾಂಶವುಳ್ಳ ಆಹಾರ ತಯಾರಿಕೆ ಕೌಶಲ ತಾಯಂದಿರು ತಿಳಿದುಕೊಳ್ಳಬೇಕು ಎಂದರು.
ಇದನ್ನೂ ಓದಿ: ಹೆಣ್ಣುಮಕ್ಕಳ ಆರೋಗ್ಯ-ಶಿಕ್ಷಣ, ಸದೃಢ ಸಮಾಜ ನಿರ್ಮಾಣ
ಸಿರಗುಪ್ಪದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನ್ ಎಸ್.ಕಾಳಾಪುರ ಮಾತನಾಡಿ, ತಾಲೂಕಿನಲ್ಲಿ ಪೌಷ್ಟಿದಿಂದ ಬಳಲುತ್ತಿರುವ ಹಳದಿ ವಲಯದ 32 ಮಕ್ಕಳನ್ನು ಗುರುತಿಸಿದ್ದು, ಇವರಿಗೆ 15 ದಿನ ಶಿಬಿರದಲ್ಲಿ ಆರೈಕೆ ಮಾಡಲಾಗುವುದು. ಮಗುವಿನೊಂದಿಗೆ ಇರುವ ತಾಯಿಗೂ ನಿತ್ಯ 300 ರೂ. ಪ್ರೋತ್ಸಾಹ ಧನ ನೀಡಲಾಗುವುದು.
ಕಡಿಮೆ ಖರ್ಚಿನ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರ ತಯಾರಿಕೆ ಮತ್ತು ಮಕ್ಕಳಿಗೆ ಉಣ್ಣಿಸುವಿಕೆ, ಮಕ್ಕಳ ಲಾಲನೆ ಪಾಲನೆ, ಮಗುವಿನೊಂದಿಗಿನ ಆಟಪಾಠ ಸೇರಿ ಮಗುವಿನ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯೊಂದಿಗೆ ಅಪೌಷ್ಟಿಕದಿಂದ ಪಾರು ಮಾಡುವ ಕುರಿತು ತಾಯಂದಿರಿಗೆ ತರಬೇತಿ ನೀಡಲಾಗುವುದು ಎಂದರು.
ವೈದ್ಯಾಧಿಕಾರಿ ಡಾ.ರಾಧಿಕಾ, ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ, ಕಲಿಕಾ ಟಾಟಾ ಟ್ರಸ್ಟ್‌ನ ಶಾಲಾಪೂರ್ವ ಶಿಕ್ಷಣ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕೆ.ಜಗನ್ನಾಥ, ಬಿಎಚ್‌ಸಿಒ ಕೆ.ಶೋಭಾ, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ್, ಶುಶ್ರೂಷಕ ಅಧಿಕಾರಿ ಡಿ.ದೇವಣ್ಣ, ನಿಲಯಪಾಲಕ ಕೆ.ವಿರೂಪಾಕ್ಷಿ, ಮೇಲ್ವಿಚಾರಕಿಯರಾದ ಲತೀಫಾ ಬೇಗಂ, ಅಕ್ಷತಾ ಮಸ್ಕಿ, ಉಷಾಸಿಂಗ್, ರೇಣುಕಾ ಇತರರಿದ್ದರು.