

ಚನ್ನಗಿರಿ: ನಾಸ್ತಿಕತೆಯಿಂದ ಹೊರಬಂದು ಆಸ್ತಿಕತೆಯತ್ತ ಮನಸ್ಸನ್ನು ನಡೆಸಬೇಕು, ಆಗ ಮಾತ್ರ ಸಿದ್ಧಿ ಪಡೆಯಲು ಸಾಧ್ಯ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಗುಡ್ಡದ ಮಲ್ಲಿಗೇನಹಳ್ಳಿಯಲ್ಲಿ ಬುಧವಾರ ಮಾತಂಗೆಮ್ಮ ದೇವಸ್ಥಾನದ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಮನುಷ್ಯ ಒತ್ತಡದ ಬದುಕಿನಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲದೆ ಜೀವನದ ಸುಖವನ್ನು ಕಳೆದುಕೊಳ್ಳುತ್ತಿದ್ದಾನೆ. ಒತ್ತಡದಿಂದ ಹೊರಬರಲು ಅಧ್ಯಾತ್ಮದ ಚಿಂತನೆ ಅವಶ್ಯ. ಮನಸ್ಸನ್ನು ಸದಾ ಆನಂದವಾಗಿ ಇಟ್ಟುಕೊಳ್ಳಬೇಕಾದರೆ ದೇವರು, ಪ್ರವಚನ, ಧ್ಯಾನ, ಧರ್ಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ದೇವಸ್ಥಾನಗಳನ್ನು ಸರ್ಕಾರ ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯಿಂದ ಸುಲಭವಾಗಿ ನಿರ್ಮಾಣ ಮಾಡಬಹುದು. ಆದರೆ ನಿರ್ವಹಣೆ ಮಾಡದಿದ್ದರೆ ದೇಗುಲ ನಿರ್ವಿುಸಿದ್ದಕ್ಕೆ ಸಾರ್ಥಕತೆ ಇರುವುದಿಲ್ಲ. ದೇವಸ್ಥಾನದ ಸ್ವಚ್ಛತೆ ಕಾಪಾಡಬೇಕು, ಅರ್ಚಕರನ್ನು ನೇಮಕ ಮಾಡಿ ಪ್ರತಿದಿನ ಬೆಳಗ್ಗೆ, ಸಂಜೆ ಪೂಜೆ ಸಲ್ಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಬರುತ್ತಾರೆ ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಎಂ.ಇ. ಓಂಕಾರಯ್ಯ, ಬಸವರಾಜ್, ನಾಗೇಂದ್ರಯ್ಯ, ಎಂ.ಎಚ್. ವೆಂಕಟೇಶ್, ಎಂ.ಎನ್. ಹಾಲಸ್ವಾಮಿ, ತಿಪ್ಪಣ್ಣ, ಎ.ಕೆ. ಹನುಮಂತಪ್ಪ, ಮೂರ್ತಪ್ಪ, ಎ.ಜಿ. ಗಿರೀಶ್, ಶಿವಮೂರ್ತಿ ಇದ್ದರು.