ಜಗದ್ಗುರು ಪಂಚಾಚಾರ್ಯ ರಥೋತ್ಸವ

19 chn
Published on

ಚನ್ನಗಿರಿ: ಚನ್ನಗಿರಿ ಶ್ರೀ ಕೇದಾರ ಶಾಖಾ ಮಠದ ವತಿಯಿಂದ ಜಗದ್ಗುರು ಪಂಚಾಚಾರ್ಯ ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ನೆರವೇರಿತು.

ರಥೋತ್ಸವದ ನಿಮಿತ್ತ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದಲ್ಲಿ ದೇವರನ್ನು ಹೂಗಳಿಂದ ಅಲಂಕರಿಸಿ ಪೂಜೆ, ಅಭಿಷೇಕ, ಪುಣ್ಯಾಹ, ಅಂಕುರದರ್ಪಣ, ಅಷ್ಟಾವಧಾನ ಸೇವೆ, ರಕ್ಷಾಬಂಧನ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ಜತೆಗೆ ದೇವರ ಕಳಸ ಸ್ಥಾಪನೆ, ಧ್ವಜಾರೋಹಣ, ನವಗ್ರಹಸ್ಥಾಪನೆ, ಗಜೇಂದ್ರೋತ್ಸವ ಕಾರ್ಯಕ್ರಮಗಳು ಜರುಗಿತು.

ರಥದ ಪೂಜೆ, ರಥಾಂಗಹೋಮ, ಬಲಿದಾನದ ಬಿಳಿಕ ಮಧ್ಯಾಹ್ನ ರಥೋತ್ಸವ ನೆರವೇರಿತು. ಭಕ್ತರು ರಥಕ್ಕೆ ಮಂಡಕ್ಕಿ, ಮೆಣಸು ಮತ್ತು ಬಾಳೆಹಣ್ಣು ಹಾಕುವ ಮೂಲಕ ಭಕ್ತಿ ಪ್ರದರ್ಶಿಸಿದರು.

ಭಕ್ತರಿಗೆ ಅನ್ನದಾಸೋಹವನ್ನು ಮಠದಲ್ಲಿ ಏರ್ಪಡಿಸಲಾಗಿತ್ತು. ತಾಲೂಕಿನ ಎಲ್ಲ ಗ್ರಾಮಗಳ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಎಡೆಯೂರು ಕ್ಷೇತ್ರದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ರೇಣುಕಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ನಡೆದ ಜನಗಣತಿಯ ಅಂಕಿ ಅಂಶಗಳನ್ನು ಅಖಿಲ ವೀರಶೈವ ಮಹಾಸಭೆಯಲ್ಲಿ ವಿರೋಧಿಸಲಾಗಿದೆ. ಸರ್ಕಾರ ಮರು ಪರಿಶೀಲನೆ ಮಾಡಬೇಕು. ಜನಗಣತಿ ಸಕ್ರಮವಾಗಿ ನಡೆಸಬೇಕು ಎಂದರು.

ರಾಜ್ಯದಲ್ಲಿ ಒಟ್ಟು 82 ಲಿಂಗಾಯತ ಶಾಸಕರಿದ್ದಾರೆ. ಜನಗಣತಿ ವಿಷಯ ಬಂದ ಸಮಯದಲ್ಲಿ ಎಲ್ಲ ಶಾಸಕರು ಸಂಘಟಿತರಾಗಬೇಕು. ಶಾಸಕ ಶಿವಗಂಗಾ ಬಸವರಾಜ್ ಒಬ್ಬರೇ ಲಿಂಗಾಯತ ಶಾಸಕರು ರಾಜೀನಾಮೆಯನ್ನು ನೀಡಿ ಎಂದು ಹೇಳಿಕೆ ನೀಡಿರುವುದು ಸಂತಸ ತಂದಿದೆ ಎಂದರು.

ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಸ್ವಾಮೀಜಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಸಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net