ಕೇರಳ ವಾಹನಗಳಿಂದ ವಸೂಲಿ ದಂಧೆ, ರಾಜ್ಯದ ಸರ್ಕಾರಿ ಬಸ್‌ಗಳಿಗೆ ಡಿಕ್ಕಿ ಹೊಡೆದು ವಸೂಲಿ ಮಾಡುವ ದುಷ್ಕರ್ಮಿಗಳು

KL
ಟ್ರಾಫಿಕ್
Published on

ಶ್ರವಣ್ ಕುಮಾರ್ ನಾಳ ಮಂಗಳೂರು

ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗೆ ಕೇರಳ ನೋಂದಣಿಯ ವಾಹನ ಡಿಕ್ಕಿ, ಕೆಎಸ್‌ಆರ್‌ಟಿಸಿ ಡ್ರೈವರ್ ಹಾಗೂ ಕೆ.ಎಲ್. ವಾಹನ ಸವಾರರ ಜತೆ ವಾಗ್ವಾದ, ಕ್ಷಣಾರ್ಧದಲ್ಲಿ ಕೇರಳ ಮೂಲದ ಹಲವರ ಜಮಾವಣೆ- ಚರ್ಚೆ, ಕೊನೆಗೆ ತನ್ನ ತಪ್ಪಿರದಿದ್ದರೂ ಕೆಎಸ್‌ಆರ್‌ಟಿಸಿ ಚಾಲಕನಿಂದ ಹಣ ವಸೂಲಿ!

ಇದು ಮಂಗಳೂರಿನಲ್ಲಿ ನಡೆಯುತ್ತಿರುವ ಕೇರಳ ನಿರುದ್ಯೋಗಿಗಳ ಹೊಸ ದಂಧೆ.

ಕೇರಳ ನೋಂದಣಿ ಹೊಂದಿರುವ ಕಾರು, ಬೈಕ್, ಓಮ್ನಿ, ದ್ವಿಚಕ್ರ ವಾಹನ ಸೇರಿದಂತೆ ಹಲವು ವಾಹನಗಳು ಮಂಗಳೂರು ನಗರದಲ್ಲಿ ಓಡಾಡುವುದು ಸಾಮಾನ್ಯ. ಬಹುತೇಕ ವಾಹನಗಳಲ್ಲಿ ಇನ್ಶುರೆನ್ಸ್ ಅಥವಾ ಇತರೆ ದಾಖಲೆ ಇರುವುದಿಲ್ಲ. ಪೊಲೀಸರು ಈ ವಾಹನ ತಡೆದರೆ 500 ರೂ. ನೀಡಿ ಪಾರಾಗುವ ಈ ಚಾಲಾಕಿಗಳಿಗೆ ಸರ್ಕಾರಿ ಬಸ್, ಹೊರ ಜಿಲ್ಲೆಯ ವಾಹನಗಳೇ ಟಾರ್ಗೆಟ್. ಕೇರಳ ನೋಂದಣಿಯ ಹಳೇ ವಾಹನಗಳನ್ನು ಸರ್ಕಾರಿ ಬಸ್, ಹೊರಜಿಲ್ಲೆಯ ವಾಹನಗಳಿಗೆ ತಾವೇ ಗುದ್ದಿ ಬಳಿಕ ಹಣಕ್ಕೆ ಬೇಡಿಕೆ ಇಡುವುದು ಹೆಚ್ಚುತ್ತಿದೆ.

* ವಸೂಲಿ ದಂಧೆ ಹೇಗೆ?:

ಕೇರಳ ನೋಂದಣಿ ಸಂಖ್ಯೆಯ ಹಳೇ ವಾಹನ ಸವಾರರು ತಾವಾಗಿಯೇ ಸರ್ಕಾರಿ ಬಸ್‌ಗೆ ಒರೆಸಿ ಬಸ್ಸನ್ನು ತಡೆಯುತ್ತಾರೆ. ತಮ್ಮ ವಾಹನಕ್ಕೆ ಬಸ್ ಡಿಕ್ಕಿಯಾಗಿ ಪೇಂಟ್ ಹೋಗಿದೆ, ಡೆಂಟ್ ಆಗಿದೆ ಎಂದು ಗಲಾಟೆ ಮಾಡುತ್ತಾರೆ. 4-5 ಸಾವಿರ ರೂ.ಗೆ ಬೇಡಿಕೆಯಿಟ್ಟು, ನೀಡದಿದ್ದರೆ ಕೇಸ್ ದಾಖಲಿಸುವ ಬೆದರಿಕೆ ಹಾಕುತ್ತಾರೆ.

ಪೊಲೀಸ್ ದೂರು ದಾಖಲಾದರೆ ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಗೆ, ನಿರ್ವಾಹಕರಿಗೆ ತೊಂದರೆಯಾಗುತ್ತದೆ. ಪೊಲೀಸ್ ಠಾಣೆ, ಕೋರ್ಟು ಅಲೆದಾಡಬೇಕು. ನಿಗಮದ ಅಧಿಕಾರಿಗಳೂ ಕಿರಿಕಿರಿ ಮಾಡುತ್ತಾರೆ. ಚಾಲಕ-ನಿರ್ವಾಹಕರ ಪ್ರೊಫೈಲ್‌ಗೂ ಕಪ್ಪುಚುಕ್ಕೆ. ಇದು ಮುಂದೆ ವೇತನ ಏರಿಕೆ ಸಹಿತ ಇತರ ಸಂದರ್ಭಗಳಲ್ಲಿ ಸಮಸ್ಯೆ. ಬಸ್ ಟ್ರಿಪ್ ಕಡಿತವಾದರೂ ತೊಂದರೆಯಾಗುತ್ತದೆ. ಈ ಭಯದಿಂದ ಕೆಎಸ್ಸಾರ್ಟಿಸಿ ಬಸ್ ಚಾಲಕರು ತಾವೇ ಕೈಯಿಂದ ಒಂದೆರಡು ಸಾವಿರ ರೂ. ನೀಡಿ ಸುಮ್ಮನಾಗುತ್ತಾರೆ.

ಪೊಲೀಸ್ ಕೇಸ್‌ನ ಗೋಜಿಗೆ ಹೋಗದ ಹೊರ ಜಿಲ್ಲೆ, ರಾಜ್ಯದ ವಾಹನಗಳಂತೂ ದಂಧೆಕೋರರು ಕೇಳಿದಷ್ಟು ಹಣ ಕೊಟ್ಟದ್ದೂ ಇದೆ. ಇದನ್ನೇ ದಂಧೆಕೋರರು ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ.

ಪೊಲೀಸರ ಅಸಹಾಯಕತೆ:

ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ 10 ಸಾವಿರಕ್ಕೂ ಅಧಿಕ ಕೇರಳ ನೋಂದಣಿ ವಾಹನಗಳು ದಿನನಿತ್ಯ ಓಡಾಡುತ್ತಿವೆ. ಓವರ್‌ಲೋಡ್, ತ್ರಿಬಲ್ ರೈಡಿಂಗ್ ಇದ್ದರೂ ಪೊಲೀಸರಿಗೆ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಕೇರಳ ನೋಂದಣಿ ವಾಹನ ವಾರಸುದಾರರ ವಿಳಾಸ ಪತ್ತೆ ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ. ಆ ವಾಹನಗಳಿಗೆ ನೋಟಿಸ್ ನೀಡಲೂ ಸಾಧ್ಯವಾಗುತ್ತಿಲ್ಲ ಎಂಬುದು ಪೊಲೀಸರ ಅಳಲು. 2018ರಿಂದ 2021ರವರೆಗೆ ಕೇರಳ ನೋಂದಣಿಯ ವಾಹನಗಳ 8,013 ವಾರಸುದಾರರಿಗೆ ನೋಟಿಸ್ ನೀಡಲಾಗಿತ್ತು. ಅದಕ್ಕೆ 531 ವಾಹನ ವಾರಸುದಾರರಿಂದ ಮಾತ್ರ ಪ್ರತಿಕ್ರಿಯೆ ಬಂದಿದೆ.

..............

ಹಿಟ್ ಆ್ಯಂಡ್ ರನ್

ಮಂಗಳೂರು ನಗರದ ಸುತ್ತಮುತ್ತ ರಾತ್ರಿಯಾಗುತ್ತಿದ್ದಂತೆ ಕೇರಳ ನೋಂದಣಿ ವಾಹನಗಳ ಅಬ್ಬರ ಶುರುವಾಗುತ್ತದೆ. ನಗರದಲ್ಲಿ ರಾತ್ರಿ 9-11ರ ಮಧ್ಯೆ ಪೊಲೀಸರ ಸಂಚಾರ ತುಸು ವಿರಳ. ಇದೇ ವೇಳೆ ನಗರದೆಲ್ಲೆಡೆ ವಿಚಿತ್ರ ಹಾಗೂ ಕರ್ಕಶ ಶಬ್ದದೊಂದಿಗೆ ಕೇರಳ ನೋಂದಣಿ ವಾಹನಗಳು ಹೆಚ್ಚಾಗಿ ತಿರುಗಾಡುತ್ತವೆ. ಈ ಸಂದರ್ಭ ಅತಿ ಹೆಚ್ಚು ಹಿಟ್ ಆ್ಯಂಡ್ ರನ್ ಪ್ರಕರಣ ನಡೆಯುತ್ತದೆ.

.............

ಅಕ್ರಮ ಮರಳು ಸಾಗಾಟ

ಕೇರಳ ನೋಂದಣಿಯ ಹತ್ತಾರು ಲಾರಿ, ಟಿಪ್ಪರ್‌ಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಾಟದಲ್ಲಿ ತೊಡಗಿಸಿಕೊಂಡಿವೆ. ಇವು ಎಲ್ಲಿಂದ ಎಲ್ಲಿಗೆ ಮರಳು ಸಾಗಾಟ ಮಾಡುತ್ತವೆ ಎಂಬುದನ್ನು ಪೊಲೀಸರೂ ಪರಿಶೀಲನೆ ನಡೆಸುವುದಿಲ್ಲ. ಗಣಿ ಇಲಾಖೆಯಂತೂ ಅಪರೂಪಕ್ಕೆ ದಾಳಿ ಪ್ರಹಸನ ನಡೆಸಿ ಸುಮ್ಮನಾಗುತ್ತದೆ.

ಅನವಶ್ಯಕವಾಗಿ ವಾಹನಗಳಿಗೆ ಡಿಕ್ಕಿ ಹೊಡೆದು ಹಣದ ಬೇಡಿಕೆಯಿಡುವ ಬಗ್ಗೆ ಕಂಡು ಬಂದರೆ ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಿ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆ.ಎಲ್ ವಾಹನಗಳ ಬಗ್ಗೆ ಪೊಲೀಸರು ನಿರಂತರ ನಿಗಾ ಇರಿಸುತ್ತಾರೆ. ವಾಹನಗಳ ದಾಖಲೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ದಿನೇಶ್ ಕುಮಾರ್, ಡಿಸಿಪಿ, ಸಂಚಾರ ವಿಭಾಗ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net