ನ.19ರಂದು ಮಂಡ್ಯದಲ್ಲಿ ಕೆಇಎ ಪರೀಕ್ಷೆ: ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಡಿಸಿ

KEA Exam Meeting mandya
Published on

ಮಂಡ್ಯ: ನಗರದಲ್ಲಿ ನ.19ರಂದು ನಡೆಯಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ಯಾವುದೇ ಲೋಪ ಉಂಟಾಗದಂತೆ ನಡೆಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ವ್ಯವಸ್ಥಾಪಕರು(ತಾಂತ್ರಿಕ), (ತಾಂತ್ರಿಕೇತರ), ಗ್ರೂಪ್-ಬಿ, ಸಹಾಯಕ ವ್ಯವಸ್ಥಾಪಕರು, ಗುಣಮಟ್ಟ ನಿರೀಕ್ಷಕರು, ಹಿರಿಯ ಸಹಾಯಕರು(ಲೆಕ್ಕ), ಕಲ್ಯಾಣಾಧಿಕಾರಿ, ಗ್ರೂಪ್-ಸಿ, ಕ್ಷೇತ್ರ ನಿರೀಕ್ಷಕರು, ಆಪ್ತ ಸಹಾಯಕರು, ಸಹಾಯಕ ವ್ಯವಸ್ಥಾಪಕರು(ಸೇಲ್ಸ್), ಅಕೌಂಟ್ಸ್, ಫರ್ಸನಲ್(ಫಾರ್ಮ), (ಟೂರ್ ಟ್ರಾವಲ್ಸ್), (ಇಡಿಪಿ), ಕಲ್ಯಾಣ ಅಧಿಕಾರಿ ಕ್ಷೇತ್ರ ನಿರೀಕ್ಷಕರ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದರು.

14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ 2.30 ರಿಂದ ಸಂಜೆ 4.30ರವರೆಗೆ ಪರೀಕ್ಷೆ ಇರಲಿದೆ. ಬೆಳಗ್ಗಿನ ಪರೀಕ್ಷೆಗೆ ಸಂಬಂಧಿಸಿದಂತೆ 5,504 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 5,124 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು 5 ಮಾರ್ಗಗಳನ್ನೊಳಗೊಂಡ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಇದರಲ್ಲಿ ತಹಸೀಲ್ದಾರ್, ಬಿಇಒ ಹಾಗೂ ಪ್ರಾಂಶುಪಾಲರು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು ಸಹ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಮಹಿಳೆಯರು ಮಾಂಗಲ್ಯ ಸರ ಹಾಗೂ ಮೂಗುತಿಯನ್ನು ಹೊರತುಪಡಿಸಿ ಇನ್ನಾವುದೇ ಆಭರಣ ಧರಿಸುವಂತಿಲ್ಲ. ಅಭ್ಯರ್ಥಿಗಳು ಕಿವಿ, ಬಾಯಿ ಹಾಗೂ ತಲೆಯನ್ನು ಮುಚ್ಚಿಕೊಳ್ಳುವಂತಹ ವಸ್ತ್ರ ಧರಿಸುವಂತಿಲ್ಲ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೂ ಜೀನ್ಸ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿದ್ದರೂ ಅಭ್ಯರ್ಥಿಗಳನ್ನು ಪರಿಶೀಲಿಸಿ ಪ್ರವೇಶ ಕಲ್ಪಿಸುವುದು. ಪರೀಕ್ಷಾರ್ಥಿಗಳು ತಮಗೆ ನೀಡಲಾಗಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿಡಿಪಿಯು ಚೆಲುವಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net