

ಕಲಬುರಗಿ: ಪಿಎಸ್ಐ, ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್, ಎ1 ಆರೋಪಿ ಆರ್ಡಿ ಪಾಟೀಲ್ ಪೊಲೀಸರು ಬರುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಕಲಬುರಗಿಯ ಜೇವರ್ಗಿ ರಸ್ತೆಯಲ್ಲಿರುವ ವರದಾ ನಗರದಲ್ಲಿನ ಅಪಾರ್ಟ್ಮೆಂಟ್ ಒಂದರಿಂದ ಪರಾರಿಯಾಗಿದ್ದಾನೆ. ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಂಧನಕ್ಕೆ ವಿಳಂಬ ಮಾಡಿದ್ರೆ ಕ್ರಮ ಎಂದ ಖರ್ಗೆ
ಕೆಇಎ ಪರೀಕ್ಷೆಯಲ್ಲಿ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರಣದ ಕುರಿತು ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು ವಿಳಂಬ ನೀತಿ ಅನುಸರಿದರೆ ಕ್ರಮ ಖಚಿತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಆರೋಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಪದೇ ಪದೆ ಜಾಗ ಬದಲಾಯಿಸುತ್ತಿದ್ದಾನೆ. ಮೊಬೈಲ್, ಸ್ಥಳವನ್ನು ಬದಲಾಯಿಸುತ್ತಿದ್ದಾನೆ. ತನಿಖೆಗೆ ಚುರುಕು ನೀಡಿದ್ದರಿಂದಲೆ ಆರೋಪಿ ಕಣ್ತಪ್ಪಿಸಿಕೊಳ್ಳುತ್ತಿದ್ದಾನೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ. ತನಿಖೆ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.
ಅಕ್ರಮದ ಕುರಿತು ರಾಜ್ಯದ ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ತನಿಖೆ ನಡೆಸಿದ್ದು, ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಲ್ಲಿ ತನಿಖೆ ಪೂರ್ಣಗೊಂಡ ನಂತರ ಸಿಐಡಿಗೆ ವಹಿಸುವ ಕುರಿತು ಗೃಹ ಸಚಿವರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.