

ಮಂಡ್ಯ: ಜಿಲ್ಲೆಯಲ್ಲಿ ಅ.28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಸ್ಪರ್ಧಾತ್ಮಕ ಪರೀಕ್ಷೆ ಯಾವುದೇ ಲೋಪವಿಲ್ಲದಂತೆ ನಡೆಯಬೇಕು. ಈ ಸಂಬಂಧ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 28ರಂದು ಆಪ್ತ ಕಾರ್ಯದರ್ಶಿ, ಹಿರಿಯ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಸೇಲ್ಸ್ ಮೇಲ್ವಿಚಾರಕರು ಸೇರಿದಂತೆ ಮುಂತಾದ ಸಮನಾದ ಹುದ್ದೆ ಹಾಗೂ 29ರಂದು ದ್ವಿತೀಯ ದರ್ಜೆ ಸಹಾಯಕರು/ ಕಿರಿಯ ಸಹಾಯಕರು ಸೇರಿದಂತೆ ಸಮನಾದ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 27 ಕೇಂದ್ರವನ್ನು ಗುರುತಿಸಲಾಗಿದೆ. 28ರಂದು 17 ಹಾಗೂ 29ರಂದು 27 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. 28ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಪರೀಕ್ಷೆಗೆ 4,162 ಮತ್ತು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಪರೀಕ್ಷೆಗೆ 4,199 ಅಭ್ಯರ್ಥಿಗಳು, 29ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಪರೀಕ್ಷೆಗೆ 10,643 ಮತ್ತು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಪರೀಕ್ಷೆಗೆ 10,697 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್ ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆಂದು ನಿಯೋಜಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಮೊಬೈಲ್ ಉಪಯೋಗಿಸುವಂತಿಲ್ಲ ಎಂದು ಸೂಚನೆ ನೀಡಿದರು.
ತಿನ್ನಬಹುದಾದ ಪದಾರ್ಥವನ್ನು ಪರೀಕ್ಷಾ ಕೊಠಡಿಯೊಳಗೆ ತರುವುದು ಹಾಗೂ ತಿನ್ನುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಮಾಸ್ಕ್ ಅನ್ನು ಧರಿಸುವಂತಿಲ್ಲ. ಪರೀಕ್ಷೆಯ ದಿನದಂದು ಪ್ರವೇಶ ಪತ್ರ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ತರುವುದು. ಎರಡು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ ತರಬೇಕು. ಜತೆಗೆ ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಅನ್ನು ತರುವಂತಿಲ್ಲ. ಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸುವುದನ್ನು, ಜತೆಗೆ ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ವಿವರಿಸಿದರು.
ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯ: ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಹಿನ್ನೆಲೆಯಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಅದರಂತೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ.
ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಅಂಗಿ ಹಾಕುವುದಕ್ಕೆ ಅನುಮತಿ ಇಲ್ಲ. ಅರ್ಧತೋಳಿನ ಅಂಗಿ ಹಾಗೂ ಸರಳ ಪ್ಯಾಂಟ್(ಕಡಿಮೆ ಜೇಬುಗಳಿರುವ) ಡ್ರೆಸ್ ಕೋಡ್ ಆಗಿದೆ. ಕುರ್ತಾ, ಪೈಜಾಮ, ಜೀನ್ಸ್‌ಪ್ಯಾಂಟ್‌ಗೆ ಅನುಮತಿಸುವುದಿಲ್ಲ. ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಅಂದರೆ ಜಿಪ್ ಪಾಕೆಟ್, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸಬಹುದು. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆ, ಉಂಗುರ ಮತ್ತು ಕಡಗ ಧರಿಸುವುದನ್ನು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೊಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು/ ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಥ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತ ಮತ್ತು ಕೆ.ಇ.ಎ ಉಲ್ಲೇಖಿಸಿರುವ ನಿಯಮದಂತೆ ಧರಿಸಬಹುದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ. ಹಿಜಾಬ್ ಧರಿಸುವ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಜರಾಗಿ ತಪಾಸಣೆಗೆ ಒಳಗಾಗಬೇಕು. ಮಾಂಗಲ್ಯ ಸರ ಮತ್ತು ಮೂಗುತಿ ಹೊರತು ಪಡಿಸಿ ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಎಂ.ಬಾಬು, ಡಿಡಿಪಿಯು ಸಿ.ಚೆಲುವಯ್ಯ, ಡಯಟ್ ಪ್ರಾಂಶುಪಾಲ ಪುರುಷೋತ್ತಮ್ ಇತರರಿದ್ದರು.