ಸಾವಿರಾರು ಕ್ವಿಂಟಲ್ ಅಕ್ಕಿ ಹಾಳು! ; ಮಕ್ಕಳಿಗೆ ಹುಳುಬಿದ್ದ ಅನ್ನ ನೀಡಿದ ಬಿಸಿಎಂ ಇಲಾಖೆ ಸುಬ್ರಾನಾಯ್ಕಾ ವಿರುದ್ಧ ಕ್ರಮಕ್ಕೆ ಜೆಸಿಎಂ ಶಿಾರಸು

17TMK_KDP_Meeting 3
Published on

ತುಮಕೂರು ; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಪೂರೈಕೆಯಾಗಿದ್ದ ಸಾವಿರಾರು ಕ್ವಿಂಟಲ್ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ಸಂಫೂರ್ಣ ಹಾಳುಗೆಡಿವಿರುವ ಅಮಾನವೀಯ ಕೃತ್ಯ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಶನಿವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಪ್ರಕರಣ ಪ್ರತಿಧ್ವನಿಸಿತು.

ಕಳೆದ ವರ್ಷ ಕರೊನಾ ನಿಯಂತ್ರಿಸಲು ಅನಿರೀಕ್ಷಿತವಾಗಿ ಎದುರಾದ ಲಾಕ್‌ಡೌನ್ ಕಾರಣಕ್ಕೆ ಲಕ್ಷಾಂತರ ಕುಟುಂಬಗಳು ಒಂದೊತ್ತಿನ ಊಟವಿಲ್ಲದೇ ಪರದಾಡಿದ್ದವು. ಆದರೆ, ಇದೇ ಸಂದರ್ಭದಲ್ಲಿ ಸರ್ಕಾರದಿಂದ ಮಕ್ಕಳಿಗೆ ನೀಡಿದ್ದ 30 ಸಾವಿರ ಕ್ವಿಂಟಲ್‌ಗೂ ಹೆಚ್ಚು ಅಕ್ಕಿ, ರಾಗಿಯನ್ನು ಬಿಸಿಎಂ ಇಲಾಖೆ ಹಾಳುಗೆಡವಿದೆ.

ಶನಿವಾರ ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಊಟವೇ ಇಲ್ಲದೇ ಜನರು ಸಾಯುತ್ತಿರುವಾಗ ನೀವು ಆಹಾರ ಹಾಳುಮಾಡಿದ್ದೀರಿ, ಜಿಲ್ಲಾಡಳಿತ ಇದಕ್ಕಿಂತ ಕೆಟ್ಟದಾಗಿ ನಡೆಯಲು ಸಾಧ್ಯವಿಲ್ಲ, ನೀವು ಜಿಲ್ಲಾಮಟ್ಟದ ಅಧಿಕಾರಿ ಎಂದು ಕರೆಸಿಕೊಳ್ಳಲು ನಾಲಾಯಕ್ ಎಂದು ಸುಬ್ರಾನಾಯ್ಕಾಗೆ ಚಳಿಬಿಡಿಸಿದರು.

ಸಮಾಜ ಕಲ್ಯಾಣ ಇಲಾಖೆ ತನ್ನ ಹಾಸ್ಟೆಲ್‌ನಲ್ಲಿ ಉಳಿದಿದ್ದ ಆಹಾರ ಪದಾರ್ಥವನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದರೂ ಬಿಸಿಎಂ ಇಲಾಖೆ ಮಾತ್ರ ಜಿಲ್ಲೆಯ ಎಲ್ಲ ಹಾಸ್ಟೆಲ್‌ಗಳಲ್ಲಿಯೂ ಆಹಾರ ಪದಾರ್ಥವನ್ನು ಹಾಳು ಮಾಡಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಪದಾರ್ಥ ಸದ್ಬಳಕೆ ಮಾಡಿಕೊಳ್ಳದೆ ಈಗ ಮಕ್ಕಳಿಗೆ ಅದೇ ಕೆಟ್ಟ ಪದಾರ್ಥ ನೀಡಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಬಿಸಿಎಂ ಇಲಾಖೆ ಅಧಿಕಾರಿಗಳ ಕರ್ಮಕಾಂಡಕ್ಕೆ ಕೆಂಡಾಮಂಡಲವಾದ ಜೆಸಿಎಂ, ಬಿಸಿಎಂ ಇಲಾಖೆ ಜಿಲ್ಲಾ ಆಧಿಕಾರಿ ಸುಬ್ರನಾಯ್ಕ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದರು.

ಬಿಸಿಎಂ ಇಲಾಖೆ ಲೆಕ್ಕದಲ್ಲಿಯೇ 30 ಸಾವಿರ ಕ್ವಿಂಟಲ್‌ಗೂ ಹೆಚ್ಚು ಅಕ್ಕಿ ಹುಳಬಿದ್ದು ಹಾಳಾಗಿದೆ, ಲಾಕ್‌ಡೌನ್ ಸಂದರ್ಭದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುವಾಗಲೂ ಅದನ್ನು ಸದ್ಬಳಕೆ ಮಾಡುವ ಮನಸ್ಸು ಬರದವನನ್ನು ಜಿಲ್ಲಾಮಟ್ಟದ ಅಧಿಕಾರಿ ಎಂದು ಕರೆಯಲು ಸಾಧ್ಯವೇ?, ಜಿಲ್ಲೆಯ ಅಧಿಕಾರಿಗಳ ಕಾರ್ಯವೈಖರಿ ನನಗೆ ಬೇಸರ ತರಿಸಿದೆ, ಹೀಗಾದ್ರೆ ಯಾರು ಆಡಳಿತ ನಡೆಸ್ತಾರೆ?. ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೆಗೆ ತರಳಿದ್ದರಿಂದ ಕಡೆಯ ತಿಂಗಳ ಆಹಾರ ಪದಾರ್ಥ ಉಳಿದಿದೆ, ಅದನ್ನು ಈಗ ಮಕ್ಕಳಿಗೆ ನೀಡಿದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಾಪಸ್ ಪಡೆದು ಕ್ರಮಕೈಗೊಳ್ಳಲಾಗಿದೆ. ಸುಬ್ರಾನಾಯ್ಕಾ, ಜಿಲ್ಲಾ ಅಧಿಕಾರಿ, ಬಿಸಿಎಂ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net