ಕೆಡಿಪಿ ತ್ರೈಮಾಸಿಕ ಸಭೆ, ಮನೆ ಕಳೆದುಕೊಂಡವರ ಮರು ಸಮೀಕ್ಷೆಗೆ ಸಚಿವ ಜಾರಕಿಹೊಳಿ ಸೂಚನೆ

IMG-20230724-WA0023.jpg
Published on

ಬೆಳಗಾವಿ: ಪ್ರವಾಹ, ಅತಿವೃಷ್ಟಿಯಿಂದ 2019-20ನೇ ಸಾಲಿನಲ್ಲಿ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಕೂಡಲೇ ಮರು ಸಮೀಕ್ಷೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.
ಸಮೀಪದ ಸುವರ್ಣ ವಿಧಾನಸೌಧದ ಕಾನ್ಫರೆನ್ಸ್ ಸಭಾಂಗಣದಲ್ಲಿ ಸೋಮವಾರ 2023-24ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ  ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನರೇಗಾ ಯೋಜನೆಯಡಿ ಹೊಲಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಿಕೊಡಲು ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು. ಅಥಣಿ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರ ಸಭೆ ನಡೆಸಿ ವಿಮಾ ಯೋಜನೆ ಸೇರಿ ಅಗತ್ಯವಿರುವ ಮಾಹಿತಿ ನೀಡಬೇಕು ಎಂದರು.
ಇಸ್ಲಾಂಪುರ ಗ್ರಾಪಂ ಸೇರಿ ವಿವಿಧ ಗ್ರಾಪಂಗಳ ಅವ್ಯವಹಾರ ಕುರಿತು ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕೇಬಲ್ ಅಳವಡಿಸಲು ಕೆಲವೆಡೆ ರಸ್ತೆ ಅಗೆಯಲಾಗುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಅಂಗವಿಕಲರಿಗೆ ಒಂದು ಬಾರಿಗೆ ದ್ವಿಚಕ್ರ ವಾಹನ ನೀಡಲು ತೀರ್ಮಾನಿಸಲಾಗಿದೆ. ಆದ್ದರಿಂದ ಅರ್ಹರ ಮಾಹಿತಿ ಸಂಗ್ರಹಿಸಬೇಕು. ಹೆಸ್ಕಾಂ ನಿರ್ಲಕ್ಷೃದಿಂದ ವಿದ್ಯುತ್ ತಂತಿ ತಗುಲಿ ಮೃತಪಟ್ಟವರಿಗೆ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರಿ ಯೋಜನೆ ಜನರ ಮನೆ ಬಾಗಿಲಿಗೆ ಕೊಂಡೊಯ್ಯಲು ಪ್ರಜಾಪ್ರತಿನಿಧಿಗಳನ್ನು ನೇಮಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಗೃಹಲಕ್ಷ್ಮೀ ಯೋಜನೆ ಕುರಿತು ಪ್ರತಿದಿನ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನರೇಗಾ ಯೋಜನೆಯಡಿ ಹೊಲಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಿಕೊಡಬೇಕು. ಜಿಲ್ಲೆಯ ರೈತರಿಗೆ ಬೆಳೆವಿಮೆ ಪರಿಹಾರದಲ್ಲಿನ ತಾರತಮ್ಯ ಸರಿಪಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇದೆ. ದಾಸ್ತಾನು ಇದ್ದಾಗಲೂ ಬೇಡಿಕೆ ಸಲ್ಲಿಸಿದರೆ ಸಕಾಲದಲ್ಲಿ ಪೂರೈಸುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
 ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಮನೆ ಹಾನಿಯಾಗಿರುವ ಪ್ರಕರಣಗಳಲ್ಲಿ 2 ತಿಂಗಳಲ್ಲಿ 52 ಕೋಟಿ ರೂ. ಬಿಡುಗಡೆಯಾಗಿದ್ದು, ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗಲಿದೆ ಎಂದರು. ಜೂನ್ ಮತ್ತು ಜುಲೈ ತಿಂಗಳು ವಾಡಿಕೆಗಿಂತ ಶೇ.11 ಕಡಿಮೆ ಮಳೆಯಾಗಿದೆೆ. ನದಿಗಳಲ್ಲಿ 2.40 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದ್ದಾಗ ಪ್ರವಾಹ ಸಾಧ್ಯತೆ ಇರುತ್ತದೆ. ಸದ್ಯಕ್ಕೆ 1.14 ಲಕ್ಷ ಕ್ಯೂಸೆಕ್ ಒಳಹರಿವು ಇರುವುದರಿಂದ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು.
 ಜಿಪಂ ಸಿಇಒ ಹರ್ಷಲ್ ಭೋಯರ್ ಮಾತನಾಡಿ, ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಸಂಬಂಧಿಸಿದಂತೆ ಹಳೆಯ ಪೈಪ್‌ಲೈನ್, ಫೀಡರ್ ಚಾನೆಲ್ ಮತ್ತಿತರ ಕೆಲಸಗಳನ್ನು ಜಲಜೀವನ ಮಿಷನ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. ಪಿಡಿಒಗಳ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಪಾವತಿಸಲು ಸರ್ಕಾರ ಆದೇಶಿಸಿದೆ. ಆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಬ್ಬರಿಸಿ ಶಾಸಕ ರಾಜು ಕಾಗೆ:
ಕಾಗವಾಡ ತಾಲೂಕಿನ ಉಗಾರ ಬಿ.ಕೆ. ಗ್ರಾಪಂನಲ್ಲಿ 2.10 ಕೋಟಿ ರೂ. ಮೊತ್ತದ ಅಕ್ರಮವಾಗಿದೆ. ಇಷ್ಟೊಂದು ದೊಡ್ಡ ಅಕ್ರಮ ಮಾಡಿದ ಪಿಡಿಒ, ಗ್ರಾಪಂ ಅಧ್ಯಕ್ಷನ ಮೇಲೆ 6 ತಿಂಗಳಾದರೂ ಕ್ರಮ ಆಗಿಲ್ಲ ಎಂದು ಸಭೆಯಲ್ಲಿ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದರು. 3-4 ಗ್ರಾಮಗಳಿಗೆ ಒಬ್ಬರೆ ಪಿಡಿಒ ಇದ್ದಾರೆ. ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕ್ರಮ ಜರುಗಿಸುವಂತೆ ಸಿಇಒಗೆ ಒತ್ತಾಯಿಸಿದರು. ಕಾಗವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವೆಡೆ 5 ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿರುವವರಿಗೆ ಈವರೆಗೆ ಪರಿಹಾರ ದೊರಕಿಲ್ಲ. ಶಾಪುರದಲ್ಲಿ 90 ಮನೆಗಳ ಕೆಟಗರಿ ವರ್ಗೀಕರಣ ಅಸಮರ್ಪಕವಾಗಿ ಮಾಡಿದ್ದರಿಂದ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು. ಮತಕ್ಷೇತ್ರದಲ್ಲಿ ಮೇವಿನ ಕೊರತೆ ನೀಗಿಸಬೇಕು. 2019-20ರ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸಮರ್ಪಕ ಪರಿಹಾರ ಒದಗಿಸಲು ಮರು ಸಮೀಕ್ಷೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸಬೇಕು. ಹಿರೇಕೊಡಿ ಸಮೀಪದಲ್ಲಿ ಇರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ 2014-15ರಲ್ಲಿ ಆರಂಭಗೊಂಡಿದ್ದು, ಇನ್ನೂ ಪೂರ್ಣಗೊಂಡಿಲ್ಲ ಎಂದರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net