

ಮಂಡ್ಯ: ಸೌಲಭ್ಯ ಕೊಟ್ಟರೂ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಕೆಲ ಶಿಕ್ಷಕರ ನಿರ್ಲಕ್ಷೃದಿಂದಾಗಿ ಮಕ್ಕಳ ಕಲಿಕಾ ಮಟ್ಟ ಯಾವ ಹಂತಕ್ಕೆ ತಲುಪಿದೆ ಎನ್ನುವ ಗಂಭೀರ ವಿಷಯ ಮಂಡ್ಯ ವಿಧಾನಸಭಾ ಕ್ಷೇತ್ರದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಅನಾವರಣಗೊಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕರು, ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಲಿಕೆ ಹಾಗೂ ಶಿಕ್ಷಕರ ತಾತ್ಸಾರದ ಅತೀವ ಬೇಸರ ಹೊರಹಾಕಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಉದಾಹರಣೆ ಸಹಿತ ವಿವರಣೆಯನ್ನೂ ನೀಡಿ ಇನ್ನಾದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತಾ ಗಮನಹರಿಸಿ. ಸರ್ಕಾರಿ ಶಾಲೆಯ ಶಿಕ್ಷಕರು ರಾಜಕಾರಣ ಮಾಡುವುದನ್ನು ಬಿಟ್ಟು ಮಕ್ಕಳಿಗೆ ಪಾಠ ಹೇಳಿಕೊಡುವಂತೆ ಸೂಚನೆ ನೀಡಿ ಬಿಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ ವಿಷಯದ ಚರ್ಚೆ ಬಂತು. ಈ ವೇಳೆ ಶಾಸಕರು ಇತ್ತೀಚೆಗೆ ನಡೆದ ಘಟನೆಯನ್ನೇ ಉದಾಹರಣೆಯಾಗಿ ನೀಡಿದರು. ಮೊನ್ನೆ ಮಂಡ್ಯ ತಾಲೂಕಿನ ಗ್ರಾಮವೊಂದರಲ್ಲಿ ಹೋಗುವಾಗ ಅಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ನನ್ನನ್ನು ಶಾಲೆಗೆ ಬರುವಂತೆ ಆಹ್ವಾನಿಸಿದರು. ಅದು ಮಂಡ್ಯ ಉತ್ತರ ವಲಯಕ್ಕೆ ಸೇರಿದ ಶಾಲೆ. ಅಲ್ಲಿಗೆ ಹೋದಾಗ ಕಾಂಪೌಂಡ್ ಇಲ್ಲ, ನೆಲ ಸರಿಯಾಗಿಲ್ಲ. ಕಟ್ಟಡದ ಸಮಸ್ಯೆ ಇದೆ. ಅನುದಾನ ಕೊಡಿಸಿ ಎಂದು ಶಿಕ್ಷಕರು ಕೇಳಿಕೊಂಡರು. ಮನವಿ ಆಲಿಸಿ ನಂತರ ತರಗತಿ ಕೊಠಡಿಗೆ ಹೋಗಿ ಮಕ್ಕಳೊಂದಿಗೆ ಮಾತನಾಡಿದೆ. ಅಂತೆಯೇ ಕರ್ನಾಟಕದ ರಾಜ್ಯಪಾಲರು ಯಾರೆಂದು ಪ್ರಶ್ನಿಸಿದರೆ ಒಬ್ಬ ವಿದ್ಯಾರ್ಥಿಯೂ ಉತ್ತರ ಕೊಡಲಿಲ್ಲ. ಇದು ನನಗೆ ನಿಜಕ್ಕೂ ಆಶ್ಚರ್ಯ ತರಿಸಿತು. ರಾಜ್ಯಪಾಲರ ಹೆಸರೇ ಗೊತ್ತಿಲ್ಲ ಎಂದರೆ ಶಿಕ್ಷಕರು ಮಕ್ಕಳಿಗೆ ಏನು ಕಲಿಸಿದ್ದಾರೆಂದು ಬಿಇಒಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರೌಢಶಾಲೆ ಮಕ್ಕಳಿಗೆ ರಾಜ್ಯಪಾಲರು, ರಾಷ್ಟ್ರಪತಿ ಯಾರೆಂದು ಗೊತ್ತಿಲ್ಲ ಎಂದರೆ ಕಲಿಕೆ ಎಷ್ಟರಮಟ್ಟಿಗಿದೆ ಎನ್ನುವುದು ನೋಡಬೇಕಾಗುತ್ತದೆ. ನಾನೂ ಹೋಗಿದ್ದ ಶಾಲೆಯಲ್ಲಿ 25 ಮಕ್ಕಳು, 10 ಜನ ಶಿಕ್ಷಕರಿದ್ದಾರೆ. ಅವರಿಗೆ ಎಷ್ಟು ವೇತನ ಬರುತ್ತಿದೆ. ಹಾಗಿದ್ದರೆ ಶಿಕ್ಷಕರು ರಾಜಕಾರಣ ಮಾಡಿಕೊಂಡು ಇದ್ದಾರೆಯೇ?. ಈ ರೀತಿಯಾದರೆ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಕಥೆ ಏನಾಗಬೇಕು. ಜತೆಗೆ ಸರ್ಕಾರ ಕೋಟ್ಯಂತರ ರೂ ಖರ್ಚು ಮಾಡಿದರೂ ಪ್ರಯೋಜನವಾಗುವುದಿಲ್ಲ. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದರು. ಇದಕ್ಕೆ ದನಿಗೂಡಿಸಿದ ಕೆಡಿಪಿ ನಾಮನಿರ್ದೇಶಿತ ಸದಸ್ಯರು, ಒಂದು ಶಾಲೆಯ ಶಿಕ್ಷಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಉಳಿದೆಡೆಯೂ ಎಚ್ಚರಿಕೆ ವಹಿಸುತ್ತಾರೆಂದು ಸಲಹೆ ನೀಡಿದರು.
ಜಿಪಂ ಉಪಕಾರ್ಯದರ್ಶಿ ಬಾಬು, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಡಿವೈಎಸ್ಪಿ ರಮೇಶ್, ತಾಲೂಕು ಪಂಚಾಯಿತಿ ಇಒ ವೀಣಾ ಇದ್ದರು.