ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚನೆ

udp-27-reju
Published on

ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳನ್ನು ಗುರುತಿಸಿ, ಮುಂಬರುವ ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ಸ್ಥಳಿಯ ನೀರಿನ ಮೂಲಗಳಿಂದ ಕುಡಿಯುವ ನೀರು ಒದಗಿಸಲು ಯೋಜನೆಗಳನ್ನು ಈಗಲೇ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ ರೇಜು ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜೆ.ಜೆ.ಎಂ ಯೋಜನೆಯಡಿ ಉಳಿದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಶೀಘ್ರವಾಗಿ ಪೂರ್ಣಗೊಳಿಸಬೇಕು. ಉಡುಪಿ ನಗರಕ್ಕೆ ವಾರಾಹಿ ಯೋಜನೆಯ ಕುಡಿಯುವ ನೀರಿನ ಕಾಮಗಾರಿಯನ್ನು ಶ್ರೀ ಮುಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆದು ಕೆಲವೊಂದು ಭಾಗದಲ್ಲಿ ತಾತ್ಕಾಲಿಕ ಕಾಮಗಾರಿಯನ್ನು ಕೈಗೊಂಡು ನಗರಕ್ಕೆ ನೀರು ಒದಗಿಸಬೇಕೆಂದರು.

ಜಿಲ್ಲೆಯಲ್ಲಿ ಮುಂದಿನ 19 ವಾರಗಳಿಗಾಗುವಷ್ಟು ಜಾನುವಾರುಗಳ ಮೇವು ಲಭ್ಯವಿದೆ. ರೈತರಿಗೆ ಹೆಚ್ಚಿನ ಮೇವಿನ ಕಿಟ್​ಗಳನ್ನು ವಿತರಿಸುವುದರೊಂದಿಗೆ ಮೇವು ಬೆಳೆಯಲು ಪ್ರೋತ್ಸಾಹಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿಯೂ ಮೇವು ಬೆಳೆಯಲು ಮುಂದಾಗಬೇಕು ಎಂದರು.

ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಬೇಕು. ಫುಡ್​ ಪ್ರೊಸೆಸ್ಸಿಂಗ್​ ಯೂನಿಟ್​ಗಳನ್ನು ತೆರೆಯಲು ಹಾಗೂ ಮಹಿಳಾ ಸ್ವಯಂ ಸಂಘಗಳ ಮೂಲಕ ಸಿದ್ಧ ಆಹಾರ ಪದಾರ್ಥಗಳ ಉತ್ಪಾದನೆಗೆ ತೊಡಗಿಸಿಕೊಳ್ಳಲು ಉತ್ತೇಜಿಸಬೇಕು ಎಂದರು.

ಸರ್ಕಾರ ವಿವೇಕ ಯೋಜನೆಯಡಿ ಹೊಸದಾಗಿ 200 ಶಾಲಾ ತರಗತಿಗಳ ನಿಮಾರ್ಣಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಅವುಗಳಲ್ಲಿ 160 ಪೂರ್ಣಗೊಂಡಿದ್ದು, 40 ಕಾಮಗಾರಿಗಳು ನಿಮಾರ್ಣ ಹಂತದಲ್ಲಿವೆ. ಇವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಎಸ್​.ಎಸ್​.ಎಲ್​.ಸಿ ಫಲಿತಾಂಶದಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆಯುವಂತೆ ಕ್ರಮಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಉಪಸ್ಥಿತರಿದ್ದರು.

ಮೀನುಗಾರಿಕೆ ಚಟುವಟಿಕೆ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮರಣ ಹೊಂದಿದ ಸಂದರ್ಭದಲ್ಲಿ ಪರಿಹಾರ ಪಡೆಯಲು ಅನುಕೂಲವಾಗುವಂತೆ ಮೀನುಗಾರರ ಸೊಸೈಟಿಯಲ್ಲಿ ಸದಸ್ಯತ್ವ ಹೊಂದಿದ ಮೀನುಗಾರರಿಗೆ ವಿಮೆಯ ಪ್ರೀಮಿಯಂ ಮೊತ್ತವನ್ನು ಸರ್ಕಾರ ತುಂಬುತ್ತಿದೆ.  ಮರಣ ಹೊಂದಿದ ಮೀನುಗಾರರಿಗೆ 5 ಲಕ್ಷ ರೂ. ವರೆಗೆ ಪರಿಹಾರವನ್ನು ಒದಗಿಸಲಾಗುವುದು. ಕಳೆದ ಹಲವು ದಿನಗಳ ಹಿಂದೆ ಗಂಗೊಳ್ಳಿಯ ಬಂದರುಗಳಲ್ಲಿ ಬೆಂಕಿ ಅಪಘಾತದಿಂದ ಸುಟ್ಟು ಹೋದ ಬೋಟ್​ ಮಾಲೀಕರಿಗೆ ಶೀಘ್ರದಲ್ಲಿಯೇ ಪರಿಹಾರ ಹಣವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net