

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಸ್ಮಾರ್ಟ ಸಿಟಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದು ಈಗಾಗಲೇ ಸೂಚನೆ ನೀಡಿದ್ದರೂ ಮತ್ತೆ ಅರ್ಧಂರ್ಬಧ ಮಾಹಿತಿ ತರುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಆಕ್ರೋಶಕ್ಕೆ ಕಾರಣರಾದರು.
ಇಲ್ಲಿಯ ಐಟಿ ಪಾರ್ಕ್‌ನಲ್ಲಿರುವ ಕೆಯುಐಡಿಎಫ್ ಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಮಹಾನಗರ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳ ಮಾಹಿತಿ ಕೊರತೆ, ನಿರ್ಲಕ್ಷ್ಯ ಕ್ಕೆ ಸಚಿವ ಸಂತೋಷ ಲಾಡ್ ತೀವ್ರ ಸಿಡಿಮಿಡಿಗೊಂಡರು.
ಅಧಿಕಾರಿಗಳು ಪ್ರತಿ ಹೆಜ್ಜೆಗೂ ಕೇಳಿದ ಮಾಹಿತಿಗೆ ತಡವರಿಸಿದರು. ಹೀಗೆ ಎಷ್ಟು ದಿನ ಮಾಹಿತಿ ಇಲ್ಲದೇ ಇರುತ್ತೀರಿ? ಎಂದು ಗದರಿದರು.
ಮಹಾನಗರ ಪಾಲಿಕೆ ಲೀಸ್ ಪ್ರಾಪರ್ಟಿ ಎಷ್ಟು, ಅವುಗಳ ದಾಖಲೆ ಇದೆಯೇ, ಸಮೀಕ್ಷೆ ಮಾಡಲಾಗಿದೆಯೇ? ಪಾಲಿಕೆಯ ಒಟ್ಟು ಆಸ್ತಿಗಳೆಷ್ಟು, ಅವುಗಳನ್ನು ತೆರಿಗೆಗೆ ಒಳಪಡಿಸುವ ಬಗೆ ಹೇಗೆ? ಎಂಬ ಬಗ್ಗೆ ಯಾವುದೇ ಸಮರ್ಪಕ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಲಿಲ್ಲ.
ಬಿಲ್ ಕಲೆಕ್ಟರ್ ಗೆ ಜವಾಬ್ದಾರಿ:
ಮಹಾನಗರ ಪಾಲಿಕೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದರೂ ತೆರಿಗೆ ಸಂಗ್ರಹ ಕಡಿಮೆಯಾಗುತ್ತಿದೆ. ಹೆಚ್ಚಳಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದರೆ ಅಧಿಕಾರಿಗಳ ಬಳಿ ಸಮರ್ಪಕ ಉತ್ತರ ಇರಲಿಲ್ಲ. ಹಾಗಾಗಿ ಮುಂದಿನ ಸಭೆಯೊಳಗೆ ಬಿಲ್ ಕಲೆಕ್ಟರ್ಗಳು ತಮ್ಮ ವಲಯದ ವ್ಯಾಪ್ತಿಯಲ್ಲಿ ಇರುವ ಒಟ್ಟು ಆಸ್ತಿಗಳ ವಿವರ ಸಂಗ್ರಹಿಸಬೇಕು, ಮಹಾನಗರ ಪಾಲಿಕೆ ಒಡೆತನದ ಆಸ್ತಿಗಳು ಅತಿಕ್ರಮಣವಾಗಿದ್ದರೆ ದಾಖಲಿಸಬೇಕು, ತೆರಿಗೆ ಸಂಗ್ರಹ ಹೆಚ್ಚಳ ಮಾಡಲು ಯಾವ ಮಾನದಂಡ ಅನುಸರಿಸುತ್ತೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದ ಸಚಿವರು, ಈ ಜವಾಬ್ದಾರಿಯನ್ನು ಬಿಲ್ ಕಲೆಕ್ಟರ್ಗಳಿಗೆ ನೀಡಿದರು.
1.81 ಲಕ್ಷ ಮನೆಗಳು, 35ಸಾವಿರ ಅಕ್ರಮ ಸಕ್ರಮ ಆಸ್ತಿಗಳು, 34 ಸಾವಿರ ಕಮಷಿರ್ಯಲ್ ಆಸ್ತಿಗಳು ಇವೆ. ಈ ಎಲ್ಲವುಗಳಿಂದ 121 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
2744 ಆಸ್ತಿಗಳನ್ನು ಲೀಸ್ ನೀಡಲಾಗಿದೆ. ಆದರೆ, ಇವುಗಳ ದಾಖಲೆಯೇ ಪಾಲಿಕೆ ಬಳಿ ಇಲ್ಲ ಎಂಬುದು ಸಭೆಯಲ್ಲಿ ಸಚಿವರ ಗಮನಕ್ಕೆ ಬಂತು. ಇದಕ್ಕೆ ಸಂಬಂಧಿಸಿ ಮುಖ್ಯವಾಗಿ ಬಿಲ್ ಕಲೆಕ್ಟರ್ ಜತೆಗೆ ಪ್ರತ್ಯೇಕ ಸಭೆ ಮಾಡಲಾಗುವುದು. ಸುಮಾರು 600 ಎಕರೆಯಲ್ಲಿರುವ ಮಹಾನಗರ ಪಾಲಿಕೆ ಆಸ್ತಿಯನ್ನು ಲೀಸ್ ನೀಡಲಾಗಿದೆ. ಇದನ್ನು ವಾಪಸ್ ಪಡೆದರೆ ಹುಬ್ಬಳ್ಳಿಯನ್ನು ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಮಾಡಬಹುದು ಎಂದು ಸಚಿವರು ಹೇಳಿದರು.
ಅವಳಿನಗರ ಹೇಗಿರಬೇಕು? ಎಂದು ನೀಲಿ ನಕ್ಷೆ ಯೊಂದಿಗೆ ಬನ್ನಿ. ಜನತಾ ಬಜಾರ್ ಮಳಿಗೆ ಹಂಚಿಕೆ ಕುರಿತು ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹುಬ್ಬಳ್ಳಿ ಧಾರವಾಡದಲ್ಲಿ 579 ಉದ್ಯಾನಗಳಿವೆ. ಇದರಲ್ಲಿ ಅರ್ಧದಷ್ಟು ಮಾತ್ರ ಪ್ಲಾಂಟೇಷನ್, ಇತರೆ ಅಭಿವೃದ್ಧಿ ಕಾರ್ಯ ಆಗಿವೆ. ಉಳಿದವು ಹಾಗೇ ಇವೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಗರದ ಉದ್ಯಾನಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ, ರೋಟರಿ ಕ್ಲಬ್, ಸಂ& ಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದು ಮಾತನಾಡಿ, ಆಸಕ್ತಿ ಇರುವವರು ಪಾರ್ಕ್ ಅಭಿವೃದ್ಧಿ ಪಡಿಸಿ ನಿರ್ವಹಣೆಯನ್ನೂ ಮಾಡಲಿದ್ದಾರೆ, ಇಂತಹ ಹೊಸ ಆಲೋಚನೆಗಳೊಂದಿಗೆ ಸಭೆಗೆ ಬನ್ನಿ ಎಂದು ಸಲಹೆ ನೀಡಿದರು.
ರಾಜಕಾರಣಿಗಳು ದಡ್ಡರು ಎಂದು ಜನ ಆಡಿಕೊಳ್ಳುತ್ತಾರೆ. ಆದರೆ, ನೀವು ಅಧಿಕಾರಿಗಳು ಓದಿಕೊಂಡು ಬಂದವರು. ನಿಮ್ಮಲ್ಲಿ ಹೊಸ ಐಡಿಯಾ ಇರಬೇಕು, ಬೇರೆ ರಾಜ್ಯ, ದೇಶಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು. ನೀವು ಅಧಿಕಾರಿಗಳು ಏನೇ ಮಾಡಿದರೆ ಜನ ಕೇಳುವುದಿಲ್ಲ, ರಾಜಕಾರಣಿಗಳನ್ನು ಕೇಳುತ್ತಾರೆ. ಒಂದಿಷ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ ಎಂದೂ ಸಚಿವರು ಬೋಧಿಸಿದರು.
ಆಡಳಿತ ಯಂತ್ರ ನಡೆಯಬೇಕು:
ರಾಜಕಾರಣಿ ಇರಲಿ, ಯಾರೇ ಅಧಿಕಾರಿಗಳು ಬರಲಿ, ಆಡಳಿತ ಯಂತ್ರ ಸುಸೂತ್ರವಾಗಿ ನಡೆಯಬೇಕು. ಅಂತಹ ವ್ಯವಸ್ಥೆಯನ್ನು ಹಿರಿಯ ಅಧಿಕಾರಿಗಳು ಮಾಡಬೇಕು, ಎಲ್ಲ ಕಡೆ ನಿಯಮಾವಳಿಗಳು ಪಾಲನೆ ಆಗಬೇಕು. ಖಾಲಿ ನಿವೇಶನಗಳನ್ನು ಪತ್ತೆ ಹಚ್ಚಿ ಅಲ್ಲಿ ಸಾರ್ವಜನಿಕ ಅನುಕೂಲದ ಕೆಲಸ ಮಾಡಿ, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಇಲ್ಲದಿದ್ದರೆ ಬೇರೆ ಇನ್ಯಾರೋ ಬಳಸಿಕೊಳ್ಳುವ ಅಪಾಯ ಇದೆ ಎಂದು ಎಚ್ಚರಿಸಿದರು.
ಔಟರ್ ರಿಂಗ್ ರೋಡ್: ಹುಬ್ಬಳ್ಳಿ ಧಾರವಾಡ ಅವಳಿನಗರ ಸುತ್ತ ಔಟರ್ ರಿಂಗ್ ರೋಡ್ ಮಾಡುವ ಬಗ್ಗೆ ಪ್ರಸ್ತಾವನೆ ಇದೆ. ಕುಸುಗಲ್ನಿಂದ ಧಾರವಾಡ ಹೊರ ವಲಯದವರೆಗೆ ಇನ್ನರ್ಧ ರಿಂಗ್ ರೋಡ್ ಮಾಡಿದರೆ ಒಂದು ಔಟರ್ ರಿಂಗ್ ರೋಡ್ ಪೂರ್ಣಗೊಳ್ಳಲಿದೆ. ಇದರ ಬಗ್ಗೆ ಸಮಗ್ರ ಚರ್ಚೆಗೆ ಸಭೆ ನಡೆಸಲಾಗುವುದು. ಬಿ ಆರ್ ಟಿಎಸ್ ಮಾದರಿಯಲ್ಲಿ ಲಘು ವಾಹನಗಳಿಗಾಗಿ ಮಾರ್ಗ ರಚನೆ ಬಗ್ಗೆ ಆಲೋಚನೆ ಮಾಡಬೇಕಿದೆ. ಇದರ ಬಗ್ಗೆ ಚಚಿರ್ಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದರು.