

ಮಂಡ್ಯ: ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ನಿಗದಿಯಾಗಿರುವಂತೆ ಪೂರ್ಣ ವೇತನ ಪಾವತಿಯಾಗಬೇಕು. ಇಲ್ಲದಿದ್ದರೆ ಸಂಬಂಧಿಸಿದವರ ವಿರುದ್ಧ ನಿರ್ದ್ಯಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿಯ ಸಾಮರ್ಥ್ಯಸೌಧದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲಾಖೆಗೆ ಹೊರಗುತ್ತಿಗೆ ನೌಕರರನ್ನು ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಅಂತೆಯೇ ನೌಕರರಿಗೆ ವೇತನ ಪಾವತಿಯಾಗುತ್ತಿದ್ದಂತೆ ಅದರಲ್ಲಿ ಒಂದಷ್ಟನ್ನು ಏಜೆನ್ಸಿದಾರರು ಪಡೆದುಕೊಳ್ಳುತ್ತಿದ್ದಾರೆನ್ನುವ ಆರೋಪವಿದೆ. ಈ ಬಗ್ಗೆ ನನಗೂ ದೂರು ಬಂದಿದೆ. ಕೆಲಸ ಮಾಡುವವರಿಗೆ ಪೂರ್ಣ ವೇತನ ಸಿಗದಿದ್ದರೆ ಹೇಗೆ?. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು. ಜತೆಗೆ ಪೂರ್ಣ ವೇತನ ನೌಕರರಿಗೆ ಸಿಗುವಂತಾಗಬೇಕು. ಈ ಸಂಬಂಧ ಏಜೆನ್ಸಿದಾರರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಸೂಚನೆ ನೀಡಿದರು.
ಇನ್ನು ಎರಡು ಅಥವಾ ಮೂರು ತಿಂಗಳಿಗೊಮ್ಮೆ ವೇತನ ಪಾವತಿಯಾದರೆ ಗುತ್ತಿಗೆ ನೌಕರರು ಬದುಕು ನಡೆಸುವುದಾದರೂ ಹೇಗೆ?. ಅವರು ನಮ್ಮಂತೆಯೇ ಮನುಷ್ಯರು ಎನ್ನುವುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಪ್ರತಿ ತಿಂಗಳು ವೇತನ ಸಿಗುವಂತಾಗಬೇಕು. ಒಂದು ವೇಳೆ ವೇತನದ ವಿಚಾರಕ್ಕೆ ಸಂಬಂಧಿಸಿದಂತೆ ಏಜೆನ್ಸಿದಾರರು ಮತ್ತೆ ಹಳೆಯ ವರಸೆ ಮುಂದುವರೆಸಿದರೆ ಸಂಬಂಧಿಸಿದವರ ವಿರುದ್ಧ ಕ್ರಮ ಅನಿವಾರ್ಯ. ವೇತನ ಕಡಿಗೊಳಿತ ಮಾಡುವುದಕ್ಕೆ ನಿಯಮವಿದ್ದರೆ ಅದನ್ನು ಲಿಖಿತವಾಗಿ ತಿಳಿಸಬೇಕು ಎಂದ ಅವರು, ಏಜೆನ್ಸಿ ಮೂಲಕ ಕೆಲಸಕ್ಕೆ ನಿಯೋಜಿಸಿಕೊಳ್ಳುವ ಬದಲು ನಿಯಮಗಳ ಪ್ರಕಾರ ತಮ್ಮ ಇಲಾಖೆಯಿಂದಲೇ ನೇರವಾಗಿ ನೇಮಕಾತಿ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ವೇತನ ನೀಡಿ. ಒಟ್ಟಾರೆ ಮತ್ತೆ ದೂರ ಬರದಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ರಸ್ತೆ ನಿರ್ವಹಣೆ ಆಗುತ್ತಿದೆಯೇ?: ಪಿಡಬ್ಲುೃಡಿ ಇಲಾಖೆ ವತಿಯಿಂದ ನೀಡಿರುವ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರ ರಸ್ತೆ ನಿರ್ವಹಣೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದರು.
ರಸ್ತೆ ನಿರ್ವಹಣೆ ಮಾಡುವ ಕೆಲಸವನ್ನು ಗುತ್ತಿಗೆದಾರರು ಕಡ್ಡಾಯವಾಗಿ ಮಾಡಲೇಬೇಕು. ಒಂದು ವೇಳೆ ಮಾಡದಿದ್ದರೆ ಸಕಾರಣದೊಂದಿಗೆ ಮಾಹಿತಿ ಕೊಡಿ. ಇನ್ನು ಉಳಿಕೆ ಕಾಮಗಾರಿ ಹಾಗೂ ಆಗಬೇಕಿರುವ ಕೆಲಸದ ವಿವರವನ್ನು ಕೂಡಲೇ ಕೊಡುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಪಿಡಿಒಗಳು ಜನರನ್ನು ಅಲೆದಾಡಿಸದೇ ಕೆಲಸ ಮಾಡಿಕೊಡಬೇಕು. ಗ್ರಾಪಂ ಕಚೇರಿಯಲ್ಲಿ ಸಮರ್ಪಕವಾಗಿ ಕೆಲಸವಾಗುತ್ತಿಲ್ಲ ಎನ್ನುವ ದೂರುಗಳಿವೆ. ಮತ್ತೆ ಅಂತಹ ಪ್ರಕರಣ ಮರುಕಳಿಸಬಾರದು. ಅಂತೆಯೇ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಸಮರ್ಪಕವಾಗಿ ನಡೆಯಲಿ. ಅಪೂರ್ಣ ಕಾಮಗಾರಿಗಳಿದ್ದರೆ ಅದಕ್ಕೆ ಸಕಾರಣದೊಂದಿಗೆ ಮಾಹಿತಿ ಕೊಡಿ ಎಂದರು.
ಸಭೆಯಲ್ಲಿ ತಾಪಂ ಇಒ ವೇಣುಗೋಪಾಲ್, ಯೋಜನಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.