ಸೌಲಭ್ಯ ತಲುಪಿಸಲು ಬೇಡ ನಿರ್ಲಕ್ಷ್ಯ

kdp meeting
Published on

ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದರು.
ದೇವನಹಳ್ಳಿಯ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಜವಾಬ್ದಾರಿಯುತವಾಗಿ ಜನರಿಗೆ ತಲುಪಿಸಬೇಕು. ಹಾಗೆಯೇ, ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಿ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಬೇಕು. ಜನಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಬೇಕು ಎಂದರು.
ಪ್ರಾಸ್ಟಿಕ್ ಅಕ್ಕಿ ಪ್ರಸ್ತಾಪ: ಪ್ರಸ್ತುತ ಪ್ರತಿ ಪಡಿತರ ಚೀಟಿಯ ಸದಸ್ಯನಿಗೆ 5 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 10 ಕೆಜಿ ನೀಡಲು ನಿರ್ಧರಿಸಿದ್ದೇವೆ. ಅಕ್ಕಿ ವಿತರಿಸಲು, ಅಕ್ಕಿ ಸಂಗ್ರಹಿಸುವ ಉಗ್ರಾಣ ವ್ಯವಸ್ಥೆಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ನೆಲಮಂಗಲದಲ್ಲಿ ಪ್ಲಾಸ್ಟಿಕ್ ಅಕ್ಕಿ ಎಂದು ಪತ್ತೆಯಾಗಿರುವ ವಿಷಯ ಪ್ರಸ್ತಾಪಿಸಿ ಪ್ಲಾಸ್ಟಿಕ್ ಅಕ್ಕಿ ಎಂಬುದರಲ್ಲಿ ಯಾವುದೇ ಸತ್ಯವಿಲ್ಲ.ಪೌಷ್ಟಿಕಾಂಶ ಹೆಚ್ಚಿಸಲು ಪ್ರತಿ 100 ಕೆಜಿ ಅಕ್ಕಿಗೆ 1ಕೆಜಿ ಫೋರ್ಟಿಫೈಡ್ ಅಕ್ಕಿ ಬೆರೆಸುತ್ತಾರೆ, ನೆಲಮಂಗಲದಲ್ಲಿ ಅದೇ ರೀತಿ ಆಗಿರಬಹುದು. ಇದರ ಬಗ್ಗೆ ಪರಿಶೀಲಿಸಿ ಶೀಘ್ರ ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆ, ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಸಿಎಸ್‌ಆರ್ ಅನುದಾನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಂಡು ಖಾಸಗಿ ಶಾಲೆಗಳಂತೆಯೇ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಮಾಹಿತಿ ಕೊರತೆ ಇದೆ: ಜನರಿಗೆ ಕೃಷಿ, ತೋಟಗಾರಿಕೆ ಇಲಾಖೆ ಯೋಜನೆಯ ಮಾಹಿತಿ ಕೊರತೆಯಿದ್ದು, ರೈತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಯೋಜನೆಗಳ ಮಾಹಿತಿ ನೀಡಲು ಕ್ರಮವಹಿಸಬೇಕು. ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಗೆ ಕ್ರಮ ವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ನಗರೀಕರಣದಿಂದಾಗಿ ದೇವನಹಳ್ಳಿಯ ಚಕೋತಾ, ಮಲ್ಲಿಗೆ ಬೆಳೆ ನಶಿಸುತ್ತಿದ್ದು, ಈ ಬೆಳೆಗಳನ್ನು ಉತ್ತೇಜಿಸಬೇಕು. ದ್ರಾಕ್ಷಿ ಬೆಳೆಗಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ದುರಸ್ತಿ ಗುಣಮಟ್ಟದಲ್ಲಿರಬೇಕು:
ಛಾವಣಿ, ಗೋಡೆ, ಶೌಚಗೃಹ ಸೇರಿ ಜಿಲ್ಲೆಯಲ್ಲಿ ಶಿಥಿಲಗೊಂಡು ದುರಸ್ತಿ ಹಂತದಲ್ಲಿರುವ ಅಂಗನವಾಡಿಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು ಹಾಗೂ ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು.ರಾಜ್ಯ ಸರ್ಕಾರದ 5 ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆ ಸೌಲಭ್ಯದ ಕುರಿತು ಅರಿವು ಮೂಡಿಸಿ ಎಂದು ಸಚಿವರು ತಿಳಿಸಿದರು.

ಹೈನೋತ್ಪಾದನೆಗೆ ಗಮನ ನೀಡಿ: ಕಳೆದ ವರ್ಷ ಜಿಲ್ಲೆಯಲ್ಲಿ ಕಾಲುಬಾಯಿ ರೋಗ, ಚರ್ಮಗಂಟು ರೋಗದಿಂದ ಹಲವು ಜಾನುವಾರು ಸಾವನ್ನಪ್ಪಿರುವ ವರದಿಯಾಗಿದೆ ಇದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮವಾಗಿ ಎಲ್ಲ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ ಹಮಿಕೊಳ್ಳಬೇಕು, ಪಶುಪಾಲನಾ ಇಲಾಖೆಯಿಂದ ಲಭ್ಯವಿರುವ ಯೋಜನೆಗಳ ಮೂಲಕ ಸಬ್ಸಿಡಿ ರೂಪದಲ್ಲಿ ರೈತರಿಗೆಹೆಚ್ಚು ಜಾನುವಾರು ನೀಡಿ, ಹಾಲು ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಮುನಿಯಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net