ಪ್ರಸಕ್ತ ಸಾಲಿನ ಮೊದಲ ಕೆಡಿಪಿ ಸಭೆ, ಬೆಳೆ ವಿಮೆ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದ ಜನ ಪ್ರತಿನಿಧಿಗಳು.

20230701_154254
Published on

ವಿಜಯವಾಣಿ ಸುದ್ದಿಜಾಲ ಗದಗ
ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಜರುಗಿದ ಕೆಡಿಪಿ ಸಭೆಯಲ್ಲಿ, ಹೆಸರು ಉತ್ಪನ್ನ, ಬೆಳೆ ವಿಮೆ, ನೀರು ಪೂರೈಕೆಯಲ್ಲಿ ಆಗಿರುವ ಲೋಪಗಳು, ಶುದ್ಧನಿರಿನ ಘಟಕ ಬಗ್ಗೆ ಗಂಭೀರ ಚರ್ಚೆಯ ಜತೆಗೆ ಜನಪ್ರತಿನಿಧಿಗಳಿಂದ ಅಧಿಕಾರಿಗಳಿಗೆ ಸಂಪ್ರದಾಯ ಆಡಳಿತ ಪಾಠ ಜರುಗಿತು.

ವಿಶೇಷವಾಗಿ ಮುಂಗಾರು ಕೊರತೆ ಹಿನ್ನೆಲೆ ಹೆಸರು ಬೆಳೆ ಉತ್ಪನ್ನ ಶೇ.100 ರಷ್ಟು ಹುಸಿಯಾಗಿದೆ. ಮಳೆಯಾದರೂ ಹೆಸರು ಉತ್ಪನ್ನ ಅಸಾಧ್ಯವಾಗಿದೆ. ಬೆಳೆನಷ್ಟಕ್ಕೆ ವಿಮೆ ಸಿಗುವಂತೆ ಮೊದಲೇ ಕ್ರಮ ಕೈಗೊಳ್ಳಬೇಕು. ರೈತರಿಗೆ ಫಸಲ್​ ಭೀಮಾ ಯೋಜನೆಯು ಸಿಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಚಿವ. ಎಚ್​.ಕೆ. ಪಾಟೀಲ, ಸಿ.ಸಿ. ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗೆ ಸಭೆಯಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದರು.
ಜಿಪಂ ಸಭಾಭವನದಲ್ಲಿ ಶನಿವಾರ ಜರುಗಿದ ಪ್ರಸಕ್ತ ಸಾಲಿನ ಮೊದಲ ಕೆಡಿಪಿ ಸಭೆಯಲ್ಲಿ ಹೆಸರು ಬಿತ್ತನೆ ಮತ್ತು ಹುಟ್ಟುವಳಿ ಬಗ್ಗೆ ಚಚಿರ್ಸಲಾಯಿತು. ಬೆಳೆ ವಿಮೆ ಕಂಪನಿಗಳು ಶೇ. 100 ರಿಂದ ಶೇ. 400 ರ ವರೆಗೆ ಲಾಭ ಮಾಡಿಕೊಳ್ಳುತ್ತವೆ. ಆದರೆ, ರೈತರಿಗೆ ರೂಪಾಯಿಗಳಲ್ಲಿ ವಿಮೆ ಪಾವತಿ ಮಾಡುತ್ತಾರೆ. ಸ್ಥಳಿಯ ವಿಮೆ ಅಧಿಕಾರಿಗಳು ತಮ್ಮ ಕೆಲಸವನ್ನು ಪಾರದರ್ಶಕವಾಗಿ ಕೆಲಸ ಮಾಡದೇ ಇದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ಬೆಳೆ ನಷ್ಟ ಸಮೀಕ್ಷೆಗೆ ಸಿಬ್ಬಂದಿ ಕೊರತೆ ವಿಷಯ ಚರ್ಚೆಗೆ ಬಂದಾಗ ಸಹಾಯಕ ನಿರ್ದೇಶಕ, ತಹಸೀಲ್ದಾರಗಳು ಸಿಬ್ಬಂದಿ ಮೂಲಕ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳು ಸೂಚಿಸಲಾಯಿತು. ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ರೈತರಿಗೆ 9 ರೂ. ಪಾವತಿ ಏನ್ರಿ? ಡಿಸಿ ಸಿಡಿಮಿಡಿ:
ವಿಮಾ ಯೋಜನೆ ಕಂಪನಿಗಳ ಬಗ್ಗೆ ಅಧಿಕಾರಿ, ಜನಪ್ರತಿನಿಧಿಗಳು ಸಭೆಯಲ್ಲಿ ಸಿಡಿಮಿಡಿಗೊಂಡರು. ವಿಮೆ ಕಂಪನಿಯನ್ನು ಬದಲಾಯಿಸಬೇಕು ಎಂದು ವೈಶಾಲಿ ಎಂ.ಎಲ್​. ಅವರು ಎಚ್​. ಕೆ. ಪಾಟೀಲ ಜತೆ ವೇದಿಕೆಯಲ್ಲೇ ಮೌಖಿಕ ಚರ್ಚೆ ನಡೆಸಿದರು. ಸಭೆಯಲ್ಲಿ ವಿಮೆಯಲ್ಲಿ ಅಧಿಕಾರಿಯನ್ನು ವೇದಿಕೆ ಮುಂಭಾಗ ಕರೆಸಿದ ಅಧಿಕಾರಿ, ಜನಪ್ರತಿನಿಧಿಗಳು ಬೆಳೆ ವಿಮೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಮಾಹಿತಿ ಕೇಳಿದರು. ಈ ವೇಳೆ ಜಿಲ್ಲಾಧಿಕಾರಿ ವೈಶಾಲಿ ಮಧ್ಯ ಪ್ರವೇಶಿಸಿ "ಎಕರೆಗೆ 9 ರೂ, 10 ರೂ, ಗಳನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. ಇವರ ವಿರುದ್ಧ ಸಚಿವಾಲಕ್ಕೆ ದೂರು ಬರೆದಿದ್ದರೂ ಇವರಿಗೆ ನಾಚಿಕೆ ಇಲ್ಲ ಎಂದರು. "ಮತ್ತೊಮ್ಮೆ ಇಂತಹ ಪ್ರಮಾದ ಮರುಕಳಿಸಿದರೆ ಎಚ್ಚರಿಕೆ' ಎಂದು ಎಚ್​. ಕೆ. ಪಾಟೀಲ, ಸಿ.ಸಿ ಪಾಟೀಲ, ಜಿ.ಎಸ್​. ಪಾಟೀಲ ಎಚ್ಚರಿಸಿದರು. ಪ್ರಸಕ್ತ ಸಾಲಿನಲ್ಲಿ ಹೆಸರು ಉತ್ಪನ್ನ ಬೆಳೆ ಭಾಗಶಃ ಕೈಕೊಟ್ಟಿದೆ. ಈ ಬಗ್ಗೆ ಗ್ರಾಮೀಣ ವಲಯದಲ್ಲಿ ಪ್ರಚಾರ ಕೈಗೊಂಡು ವಿಮೆ ತುಂಬುವಂತೆ ಅರಿವು ಕಾರ್ಯಕ್ರಮ ಮೂಡಿಸಿ ಎಂದರು. ಹೆಸರು ಬೆಳೆ ಬಿತ್ತನೆ ಗುರಿ 1.25 ಲಕ್ಷ ಹೆಕ್ಟೇರ್​ ಹೊಂದಲಾಗಿತ್ತು. ಮಳೆ ಅಭಾವದಿಂದ ಈ ವರೆಗೆ ಕೇವಲ ಬಿತ್ತನೆ 18 ಸಾವಿರ ಹೆಕ್ಟೇರ್​ ಬಿತ್ತನೆ ಆಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.


ಕಳಪೆ ಬೀಜ ವಿತರಣೆ:
ಮುಂಡರಗಿ ಮತ್ತು ಕೆಲವು ಭಾಗದಲ್ಲಿ ಕಳಪೆ ಬೀಜ ವಿತರಣೆ ಬಗ್ಗೆ ಜಿ.ಎಸ್​. ಪಾಟೀಲ ಸಭೆಯಲ್ಲಿ ಪ್ರಶ್ನೆ ಎತ್ತಿದರು. ಆರೋಪಿತ ಕಳಪೆ ಬೀಜಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಉತ್ತರಿಸುತ್ತಿದ್ದಂತೆ ಕಳಪೆ ಯಾಗಿದ್ದರೆ ಬೀಜ ವಿತರಣೆ ಕಂಪನಿಗಳ ಮೇಲೆ ಕ್ರಿಮಿನಲ್​ ಮೊಕದ್ದಮೆ ಹಾಕಲು ಎಚ್​.ಕೆ. ಪಾಟೀಲ ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ:
ಪೌಂಪ್​ ಹೌಸ್​ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ನೀರೂ ಪೂರೈಸಲು ಕನಿಷ್ಠ ಕಿಲೋ ವ್ಯಾಟ್​ ವಿದ್ಯುತ್​ ಸಂಪರ್ಕ ಎಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ ಕೆಂಡಾಮಂಡಲರಾದ ಸಚಿವ, ಶಾಸಕರುಗಳು ಪ್ರತಿ ಮನುಷ್ಯನಿಗೆ 70 ಲೀಟರ್​ ನೀರು ಪೂರೈಕೆಗೆ, ನೀರು ಎತ್ತುವಳಿ ಮಾಡಲು ಜನರೇಟರ್​ ಖರೀದಿಗೆ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ನೀವು ಕೊಟ್ಟ ಯೋಜನಾ ವರದಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ, ಈ ಸಮಸ್ಯೆ ಏಕೆ? ಎಂದು ಸಿಟ್ಟಾದರು. ಈ ಬಗ್ಗೆ ತನಿಖೆ ನಡೆಸುವಂತೆ ಸಿಇಒ ಸುಶೀಲಾ ಬಿ ಅವರಿಗೆ ಸೂಚಿಸಿದರು.

ನಗರದಲ್ಲಿ ನೀರು:
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಟ್ಯಾಂಕರ್​ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಿ. ನೀರು ಪೂರೈಕೆಗೆ ಸಂಪಕಿರ್ಸಲು ಹೊಸ ಫೋನ್​ ನಂಬರ್​ ಬಿಡುಗಡೆ ಮಾಡಿ. ಕರೆ ಮಾಡಿದವರಿಗೆ ನೀರು ಪೂರೈಸಿ. ಟ್ಯಾಂಕರ್​ ಅಗತ್ಯತೆ ಇದ್ದರೆ ಬಾಡಿಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಯಿತು.

ಶುದ್ಧ ನೀರಿನ ಘಟಕ:
ಶುದ್ಧ ನೀರಿನ ಘಟಕ ದುರಸ್ತಿಗೊಳ್ಳಬೇಕು. ಜುಲೈ ತಿಂಗಳೊಳಗೆ ಘಟಕ ಮೆಮರಿನ್​ ಗಳು ಬದಲಾಗಬೇಕು ಎಂದು ಎಚ್​.ಕೆ. ಪಾಟೀಲ ಸೂಚಿದರು. ಹಳೆಯ ಮೆಮರಿನ್​ ಗಳ ಸಂಗ್ರಹಕ್ಕೆ ಪ್ರತ್ಯೇಕ ಸ್ಟಾಕ್​ ಯಾರ್ಡ್​ ಮಾಡಿ. ಇಲ್ಲವಾದರೆ ಒಂದು ಶುದ್ಧ ನೀರಿನ ಘಟಕ ಮೆಮರಿನ್​ ಇನ್ನೊಂದು ಘಟಕಕ್ಕೆ ಅಳವಡಿಸುತ್ತಾರೆ ಎಂದು ಸಿ.ಸಿ. ಪಾಟೀಲ ಸೂಚಿಸಿದರು. ಇದೇ ಸಂದರ್ಭದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿ ಇರುವ ವ್ಯಾಪ್ತಿಯಲ್ಲಿ ಯಾವುದಾದರೂ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದ್ದರೆ ಅಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲು ಸಭೆ ನಿರ್ಣಯಿಸಿತು.

ಮೇವು ಬ್ಯಾಂಕ್​:
ಪಂಚಾಯಿತಿಗೆ ಒಂದರಂತೆ ಮೇವು ಬ್ಯಾಂಕ್​ ಸೃಷ್ಟಿಸಬೇಕು. ಮೇವು ಎಲ್ಲಿಂದ ಖರೀದಿ ಮಾಡಬೇಕು ಎಂಬುದನ್ನು ಚಚಿರ್ಸಿ ಖರೀದಿಸಲು ಸೂಚಿಸಲಾಯಿತು. ಸಿಂಧನೂರು, ಗಂಗಾವತಿ, ವಿಜಯಪುರದಿಂದ ಮೇವು ತರಲು ಯೋಜನೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹಳ್ಳದ ದಂಡೆ, ಹೊಲಗದ್ದೆಗಳ ಬದುವಿನಲ್ಲಿ ಮೇವು ಬೆಳೆಯಲು ರೈತರಿಗೆ ಉತ್ತೇಜನ ನೀಡಬೇಕು. ಇಲ್ಲಿ ಬೆಳೆದ ಮೇವನ್ನು ಜಿಲ್ಲೆಯಲ್ಲೇ ಖರೀದಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​, ಸಿಇಒ ಸುಶಿಲಾ ಬಿ, ದೀಪಿಕಾ ಬಾಜಪೇಯಿ, ಜಿ.ಎಸ್​. ಪಾಟೀಲ, ಎಸ್​.ವಿ. ಸಂಕನೂರು, ಚಂದ್ರು ಲಮಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net