ಸಭೆಗೆ ಗೈರಾದರೆ ಶಿಸ್ತು ಕ್ರಮಕ್ಕೆ ಶಿಫಾರಸು

Hrr2KDP1
Published on

ಹರಿಹರ: ಕೆಡಿಪಿ ಸಭೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದು, ನಿಗದಿತ ಸಮಯಕ್ಕೆ ಸೂಕ್ತ ದಾಖಲೆ, ಮಾಹಿತಿಯೊಂದಿಗೆ ಮುಂದಿನ ಸಭೆಗೆ ಬಾರದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಬಿ.ಪಿ.ಹರೀಶ್ ಅಧಿಕಾರಿಗಳಿಗೆ ಎಚ್ಚರಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಅಭಿವೃದ್ಧಿ ಪಥದತ್ತ ಸಾಗಲು ಕೆಡಿಪಿ ಸಭೆ ಸಹಕಾರಿಯಾಗಲಿದೆ. ಇದು ನನ್ನ ಮೊದಲ ಸಭೆ. ಹಾಗಾಗಿ ಸುಮ್ಮನಿದ್ದೇನೆ. ಇದು ಮತ್ತೆ ಮರುಕಳಿಸಿದರೆ ಕ್ರಮ ಅನಿವಾರ್ಯವಾಗಲಿದೆ ಎಂದು ಪುನರುಚ್ಚರಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಅನುದಾನ ಹರಿಸಿದ್ದರಿಂದ ಬೇರೆ ಪ್ರಗತಿಯ ಕಾಮಗಾರಿಗಳಿಗೆ ಅನುದಾನದ ಕೊರತೆ ಉಂಟಾಗಿದೆ. ಅನುದಾನದ ಕೊರತೆ ಹಾಗೂ ವಿರೋಧ ಪಕ್ಷದ ಶಾಸಕನಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಕ್ಷೇತ್ರದ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಜನರ ನಿರೀಕ್ಷೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗಿರೀಶ್ ಮಾತನಾಡಿ, ತಾಲೂಕಿನ 47 ಗ್ರಾಮಗಳಲ್ಲಿ ಈಗಾಗಲೇ ಜಲಸಿರಿ ಯೋಜನೆ ಕಾಮಗಾರಿ ಪೂರ್ಣವಾಗಿದೆ. ಉಳಿದ ಕಡೆ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮಳೆ ಕಡಿಮೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಮುಂಜಾಗ್ರತೆ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವಂತಾಗಬಾರದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಡಾ.ನಾರನಗೌಡ ಮಾತನಾಡಿ, ಕಳಪೆ ಬೀಜ ವಿತರಣೆ ಬಗ್ಗೆ ದೂರು ಬಂದಾಗ ತಕ್ಷಣವೇ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಜುಲೈಯಲ್ಲಿ ವಾಡಿಕೆಗಿಂತ ಶೇ.71ರಷ್ಟು ಮಳೆ ಕಡಿಮೆಯಾಗಿದ್ದು, ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಈಗಾಗಲೇ ವರದಿ ರವಾನಿಸಲಾಗಿದೆ. ಶೀಘ್ರದಲ್ಲಿ ಬರಪೀಡಿತ ತಾಲೂಕು ಎಂದು ಘೊಷಣೆಯಾಗುವ ನೀರಿಕ್ಷೆಯಿದೆ ಎಂದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಗರದಲ್ಲಿ 801 ಮನೆ ನಿರ್ಮಿಸಲಾಗಿದೆ. ಒಬ್ಬ ಫಲಾನುಭವಿಯಿಂದ ಒಂದರ ಬದಲು 3-4 ಡಿಡಿಗಳನ್ನು ಪಡೆದು ಮನೆ ಹಂಚಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ 801 ಮನೆಗಳ ಹಂಚಿಕೆ ಕುರಿತ ಮಾಹಿತಿ ಒದಗಿಸಿ ಎಂದು ಮಂಡಳಿ ಎಇಇ ದೇವರಾಜ್‌ರಿಗೆ ಸೂಚಿಸಿದರು.
ಸಭೆಯಲ್ಲಿ ತಾಪಂ ಇಒ ಎಸ್.ರವಿ, ತಹಸೀಲ್ದಾರ್ ಪೃಥ್ವಿ ಸಾನಿಕಂ, ಟಿಎಚ್‌ಒ ಡಾ.ಚಂದ್ರಮೋಹನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ, ಹಿಂದುಳಿದ ಇಲಾಖೆಯ ಇಷರತ್ ಪರ್ವಿನ್, ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ, ಡಾ.ಸಿದ್ದೇಶ್, ಅಬಕಾರಿ ಇಲಾಖೆಯ ರೇಖಾ, ಸಾರಿಗೆ ಇಲಾಖೆಯ ತಿಪ್ಪೇಶ್, ನಗರಸಭೆಯ ಎಇ ನೌಷಾದ್, ಸಮಾಜ ಕಲ್ಯಾಣ ಇಲಾಖೆಯ ಷಣ್ಮುಖಪ್ಪ, ಸಿಡಿಪಿಒ ರೋಹಿಣಿ, ಕೆಎಚ್‌ಬಿ ಎಇಇ ಸುಧೀರ್ ಬನಾರೆ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net