ಚಿಕ್ಕನಾಯಕನಹಳ್ಳಿ: ಕೆಡಿಪಿ ಸಭೆ ಇಲಾಖಾ ಮುಖ್ಯಸ್ಥರೇ ಗೈರು!

photo
Published on

ಚಿಕ್ಕನಾಯಕನಹಳ್ಳಿ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳು ಕೆಡಿಪಿ ಸಭೆಗೆ ಗೈರಾದರೆ ಹೇಗೆ ? ಎಂದು ಅಸಮಾಧಾನಗೊಂಡ ಶಾಸಕ ಸಿ.ಬಿ.ಸುರೇಶ್​ಬಾಬು, ಗೈರಾಗಿ ಅಸಡ್ಡೆ ತೋರಿಸಿರುವ ಅಧಿಕಾರಿಗಳಿಗೆ ನೋಟಿಸ್​ ನೀಡುವಂತೆ ತಾಲೂಕು ಪಂಚಾಯಿತಿ ಇಒಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸಭೆ ಬಗ್ಗೆ ಈಗಾಗಲೇ ನೋಟಿಸ್​ ನೀಡಿದ್ದರೂ ಅದರ ಅರಿವಿಲ್ಲದೇ ಇಲಾಖೆಯ ಮುಖ್ಯಸ್ಥರು ಹಾಜರಾಗುವ ಬದಲಿಗೆ ಬೇರೆಯವರನ್ನು ಕಳುಹಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮಡಿಹಳ್ಳಿಯಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ವಿತರಣೆಯಾಗುತ್ತಿಲ್ಲ ಎಂಬ ದೂರಿದ್ದು, ಅದನ್ನು ಬೇರೆ ಸೊಸೈಟಿಗೆ ವರ್ಗಾಯಿಸಬೇಕು. ಇದಕ್ಕೆ ಆಹಾರ ಇಲಾಖೆ ಶಿರಸ್ತೇದಾರ್​ ಕಿರಣ್​ ಸ್ಪಂದಿಸಿ, ಈಗಾಗಲೇ ತಮ್ಮಡಿಹಳ್ಳಿ ನ್ಯಾಯಬೆಲೆ ಅಂಗಡಿಯನ್ನು ಬೇರೆ ಅಂಗಡಿಗೆ ನಿಯೋಜನೆ ಮಾಡಲಾಗಿದೆ ಎಂದರು. ಇದಕ್ಕೆ ನಾಮನಿ ಸದಸ್ಯ ದೇವರಾಜು ಪ್ರತಿಕ್ರಿಯಿಸಿ, ಸದರಿ ನ್ಯಾಯಬೆಲೆ ಅಂಗಡಿಯವರು ತಿಂಗಳಲ್ಲಿ ಮೂರು ದಿನ ಮಾತ್ರ ಪಡಿತರ ವಿತರಿಸುತ್ತಿದ್ದು, ಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಯನ್ನು ಯಾವುದಾದರೂ ಸೊಸೈಟಿಗೆ ವರ್ಗಾಯಿಸುವಂತೆ ಸಲಹೆ ನೀಡಿದರು. ಆಗ ಆಹಾರ ಇಲಾಖೆ ಅಧಿಕಾರಿ ಹಂದನಕೆರೆ ಗ್ರಾಮದ ಒಸಿಎಸ್​ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸುವುದಾಗಿ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 55,310 ಬಳಕೆದಾರರಿದ್ದು, ಇದರಲ್ಲಿ 53,330 ಬಳಕೆದಾರರು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಒಟ್ಟು 17.3ಕೋಟಿ ರೂ. ಸೇರಿದೆ ಎಂದು ಬೆಸ್ಕಾಂನ ಎಇಇ ಗವಿರಂಗಯ್ಯ ಸಭೆಯಲ್ಲಿ ಮಾಹಿತಿ ನೀಡಿದರು. ಸಿಡಿಪಿಒ ಹೊನ್ನಪ್ಪ ಮಾತನಾಡಿ ಗೃಹಲಕ್ಷಿ$್ಮ ಯೋಜನೆಯಡಿ 56,642 ಜನರಿದ್ದು ಇದರಲ್ಲಿ 53 ಸಾವಿರ ಮಂದಿ ಮಹಿಳೆಯರು ನೋಂದಣಿಯಾಗಿದ್ದಾರೆ. ಈಗಾಗಲೇ ಮೇ ತಿಂಗಳವರೆಗೆ ಯೋಜನೆಯ ಹಣ ಸಂದಾಯವಾಗಿದ್ದು, ಇನ್ನುಳಿದ ಹಣ ಶ್ರೀದಲ್ಲಿಯೇ ಲಾನುಭವಿಗಳ ಖಾತೆಗೆ

ಜಮೆಯಾಗಲಿದೆ ಎಂದರು.

ಚರ್ಚೆಯಾಗದ ಗಂಭೀರ ವಿಷಯಗಳು: ಸಭೆಯಲ್ಲಿ ಯಾವುದೇ ಗಂಭೀರ ವಿಷಯಗಳು ಚರ್ಚೆಯಾಗಲಿಲ್ಲ. ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತಾಲೂಕಿನಲ್ಲಿ ಅನೇಕ ಮನೆ ಹಾಗೂ ಗೋಡೆ ಬಿದ್ದಿವೆ. ತಾಲೂಕಿನಲ್ಲಿ 958 ಕುಡಿವ ನೀರಿನ ಬೋರ್​ವೆಲ್​ಗಳಿದ್ದು, ಇವುಗಳಲ್ಲಿ ಎಷ್ಟು ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿದೆ ಎಂಬುದರ ಬಗ್ಗೆ ಚರ್ಚೆಯಾಗಲಿಲ್ಲ. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗಳಿಗೆ ಸಂಬಂಧಿಸಿದಂತೆ ಶಿಶು ಮರಣ ಹಾಗೂ ಗರ್ಭಿಣಿ ಸಾವು, ತಾಯಿ ಮರಣದ ಬಗ್ಗೆಯಾಗಲಿ, ಮೀನುಗಾರಿಕೆ ಇಲಾಖೆಯಿಂದ ಸರ್ಕಾರಕ್ಕೆ ಮೀನು ಮಾರಾಟದಲ್ಲಿ ಬಂದಿರುವ ಆದಾಯದ ಬಗ್ಗೆಯಾಗಲಿ, ರಸ್ತೆ ಬದಿ ಬೆಳೆದಿರುವ ಮರಗಿಡಗಳು ಬೆಳೆದು ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಸಂಬಂಧ ಯಾವುದೇ ಇಲಾಖೆಯ ಪ್ರಗತಿಯ ಬಗ್ಗೆ ಚರ್ಚೆ ಮಾಡದೇ ಸಭೆಯನ್ನು ಕಾಟಚಾರಕ್ಕೆ ನಡೆಸಿದಂತಾಗಿತ್ತು.

ಹೆರಿಗೆ ಪ್ರಮಾಣ ಶೇ.16: ತಾಲೂಕಿನಲ್ಲಿ 44 ಡೆಂ ಪ್ರಕರಣ ದಾಖಲಾಗಿವೆ. ಡೆಂ ಜ್ವರದ ಬಗ್ಗೆ ಇರಬೇಕಾದ ಮುನ್ನಚ್ಚರಿಕಾ ಕ್ರಮದ ಬಗ್ಗೆ ಹಾಗೂ ಇಲಾಖೆಯ ಪ್ರಗತಿಯ ಸಂಬಂಧಿಸಿದಂತೆ ತಾಲೂಕು ವೈದ್ಯಾಧಿಕಾರಿ ಡಾ.ಯಶವಂತ್​ ಮಾಹಿತಿ ನೀಡಿದರು. ತಾಲೂಕು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್​ ಮಾತನಾಡಿ, ಗರ್ಭಿಣಿಯರು ಶೇ.91ರಷ್ಟು ದಾಖಲಾದರೂ ಹೆರಿಗೆ ಪ್ರಮಾಣ ಕೇವಲ ಶೇ.16ರಷ್ಟು ಇರುವುದು ಏಕೆ? ಇದಕ್ಕೆ ಉತ್ತರಿಸಿದ ವೈದ್ಯರು ಖಾಸಗಿ ಸೇರಿ ಬೇರೆ ತಾಲೂಕಿನಲ್ಲಿ ಹೆರಿಗೆ ಮಾಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net