ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ಸಮರ

kdp
ದೇವನಹಳ್ಳಿ ತಾಲೂಕು ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು. ಶಾಸಕ ಶರತ್ ಕಮಬಚ್ಚೇಗೌಡ, ಧೀರಜ್ ಮುನಿರಾಜು, ಶಾಸಕ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಶಿವಶಂಕರ್, ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧಾ, ಅಪರ ಜಿಲ್ಲಾಧಿಕಾರಿ ಅಮರೇಶ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಇದ್ದರು
Published on

*ಜಿಪಂ ಕೆಡಿಪಿ ಸಭೆಯಲ್ಲಿ ಕಿಡಿಕಾರಿದ ಶಾಸಕರು
*ಉಸ್ತುವಾರಿ ಸಚಿವರಿಂದ ಶಾಂತಿ ಸೂತ್ರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆ ಅಕ್ಷರಶಃ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ಸಮರಕ್ಕೆ ರಣಕಣವಾಗಿ ಮಾರ್ಪಾಡಾಗಿತ್ತು. ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ಶಾಸಕರು ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಕಿಡಿಕಾರಿದರು.
ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲಾರದೆ ತಡಬಡಾಯಿಸಿದ ಅಧಿಕಾರಿಗಳು ಬೆವರು ಒರೆಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಸಭೆ ಕಾವೇರುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಉಸ್ತುವಾರಿ ಸಚಿವ ಕೆ.ಎಚ್. ಮನಿಯಪ್ಪ, ಅಧಿಕಾರಿಗಳು ಹಾಗೂ ಶಾಸಕರ ನಡುವೆ ಶಾಂತಿಸೂತ್ರ ಬಳಸಿ ಬಿಸಿಯಾಗಿದ್ದ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಸರ್ಕಾರದ ಯಾವುದೇ ಯೋಜನೆಗಳ ಮಾಹಿತಿ ಹಾಗೂ ಅನುಷ್ಠಾನದ ಬಗ್ಗೆ ಸ್ಥಳೀಯವಾಗಿ ಆಯಾ ಶಾಸಕರ ಗಮನಕ್ಕೆ ತರಬೇಕು, ಚುನಾಯಿತ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು ಎಂದು ಸೂಚಿಸಿದರು. ಜತೆಗೆ ಮತ್ತಷ್ಟು ವಿಷಯಗಳ ಚರ್ಚೆಯತ್ತ ಸಭೆಯ ಗಮನ ಸೆಳೆಯುವಲ್ಲಿ ಮುನಿಯಪ್ಪ ಸಫಲರಾದರು. ಆದರೂ ಪ್ರತಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳ ಕರ್ತವ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಅಧಿಕಾರಿಗಳಿಗೆ ಮತ್ತೆ ಮತ್ತೆ ಎಚ್ಚರಿಕೆ ನೀಡಿದರು. ಕ್ಷೇತ್ರದಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕೆಲಸಗಳ ಮಾಹಿತಿ ನೀಡುವುದಿಲ್ಲ. ಸರ್ಕಾರದ ಯೋಜನೆಗಳೇನು ಅವುಗಳ ಅನುಷ್ಠಾನ ಹೇಗಿದೆ ಎಂಬುದನ್ನೂ ಗಮನಕ್ಕೆ ತರುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಶಾಸಕರು ಮುಗಿಬಿದ್ದರು,

ಸಚಿವರು ಸೈಲೆಂಟ್, ಶಾಕಸರು ವೈಯಲೆಂಟ್ ಇತ್ತೀಚಿನ ಕೆಡಿಪಿ ಸಭೆಗಳ ಪೈಕಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ 2 ನೇ ಕೆಡಿಪಿ ಸಭೆ ಬಿಸಿ ಬಿಸಿ ಚರ್ಚೆಯ ಮೂಲಕ ಗಮನ ಸೆಳೆಯಿತು. ಅಧಿಕಾರಿಗಳಿಂದ ಸಭೆ ತುಂಬಿತ್ತು. ಉಸ್ತುವಾರಿ ಸಚಿವರೊಂದಿಗೆ ಮೂರು ತಾಲೂಕಿನ ಶಾಸಕರು ಬೆಳಗ್ಗೆಯಿಂದ ಸಭೆ ಮುಗಿಯುವವರೆಗೆ ಹಾಜರಿದ್ದು ಪ್ರತೀ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಏತನ್ಮಧ್ಯೆ ಮೂರು ತಾಲೂಕುಗಳ ಶಾಸಕರು ಅಬ್ಬರಿಸಿದರೆ ಇವರ ಮುಂದೆ ಉಸ್ತುವಾರಿ ಸಚಿವರೇ ಸೈಲೆಂಟ್ ಆಗಿದ್ದ ದೃಶ್ಯ ಕಂಡುಬಂತು. ಅದರಲ್ಲೂ ನೆಲಮಂಗಲ ಶಾಸಕ ಶ್ರೀನಿವಾಸ್ ಪ್ರತಿ ಇಲಾಖೆ ಪ್ರಗತಿ ಪರಿಶೀಲನೆ ವೇಳೆಯೂ ನೆಲಮಂಗಲ ಕ್ಷೇತ್ರದ ವಿವಿಧ ಪ್ರಗತಿಗಳ ಬಗ್ಗೆ ಅಂಕಿಅಂಶದ ಮಾಹಿತಿ ಪಡೆಯುವುದರ ಜತೆಗೆ ಕಾಲಾವಧಿಯಲ್ಲಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಒಂದು ಸಣ್ಣ ಕೆಲಸಕ್ಕೂ ಹತ್ತಾರು ಬಾರಿ ಕರೆ ಮಾಡಬೇಕು. ಆದರೂ ಕೆಲಸ ಆಗಿಲ್ಲ ಎಂದ ಮೇಲೆ ಅಧಿಕಾರಿಗಳು ಏಕೆ ಬೇಕು ಎಂದು ಅಸಹನೆ ವ್ಯಕ್ತಪಡಿಸಿದರು.

ಅಧಿಕಾರಿಗಳು ಅಡಿದ್ದೇ ಆಟ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ ಶ್ರೀನಿವಾಸ್, ಇಲಾಖೆ ಸಾಧನೆ ಕಳಪೆಯಾಗಿದೆ ಎಂದು ಕೆಂಗಣ್ಣು ಬೀರಿದರು. ಇದಕ್ಕೆ ಧ್ವನಿಗೂಡಿಸಿದ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ರಸ್ತೆಯೊಂದಕ್ಕೆ ಡಾಂಬರು ಹಾಕಲು ವರ್ಷಗಟ್ಟಲೆ ಎಳೆಯುವುದಾದರೂ ಏಕೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ನಗರಾಭಿವೃದ್ಧಿ ಇಲಾಖೆ ಯೋಜನಾ ಅಧಿಕಾರಿ ಅನುಪಸ್ಥಿತಿ ಬಗ್ಗೆಯೂ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಉಸ್ತುವಾರಿ ಸಚಿವರು ಜಿಪಂ ತಾಪಂನಲ್ಲಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳು ಅಡಿದ್ದೇ ಆಟ ಎನ್ನುವಂತಾಗಿದೆ. ಅಧಿಕಾರಿಗಳ ಕರ್ತವ್ಯ ಲೋಪ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಿಕ್ಷಕರು ರಾಜಕೀಯದಲ್ಲಿ ಬಿಜಿ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹಿಂದುಳಿಯಲು ಶಿಕ್ಷಕರ ನಿರ್ಲಕ್ಷ್ಯ ಧೋರಣೆಯೇ ಕಾರಣ. ಶಿಕ್ಷಕರು ಪಾಠ ಮಾಡುವುದು ಬಿಟ್ಟು ರಾಜಕೀಯ ಮಾಡುವುದರಲ್ಲೇ ಬಿಜಿಯಾಗಿರುತ್ತಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು. ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳನ್ನು ತರಬೇತುಗೊಳಿಸಬೇಕು. ಇಲ್ಲವಾದರೆ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದು ಎಚ್ಚರಿಸಿದರು.

ಉಸ್ತುವಾರಿ ಸಚಿವರ ಸೂಚನೆ ಅಧಿಕಾರಿಗಳು ನೆಪ ಹೇಳದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಉಸ್ತುವಾರಿ ಸಚಿವ ಮುನಿಯಪ್ಪ ಸೂಚಿಸಿದರು. ಪೋಡಿ ಮುಕ್ತ ಜಿಲ್ಲೆ ಮಾಡಲು ಜಿಲ್ಲಾಧಿಕಾರಿಗಳಿಗೆ ಗಡುವು ನೀಡಿದರು.
ನೆಲಮಂಗಲ ಕ್ಷೇತ್ರದಲ್ಲಿನ ನೀರಿನ ಅಭಾವದ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಮಾತುಕತೆ ನಡೆಸಿ ಬೋರ್‌ವೆಲ್ ಕೊರೆಸುವ ಬಗ್ಗೆ ಚರ್ಚಿಸುತ್ತೇನೆ ಎಂದರು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಗಳ ನಿರ್ಮಾಣದ ಕಾರ್ಯ ಶೀಘ್ರವಾಗಿ ಮುಗಿಯಬೇಕು ಎಂದರು.ರಸ್ತೆಗಳ ನಿರ್ಮಾಣದಲ್ಲಿ 50 ವರ್ಷಗಳ ದೂರದೃಷ್ಟಿ ಯಲ್ಲಿ ಸರಿಯಾದ ಯೋಜನೆ ರೂಪಿಸಿ ನಿರ್ಮಿಸಬೇಕು, ತರಾತುರಿಯಲ್ಲಿ ನಿರ್ಮಾಣ ಮಾಡಬಾರದು ಇದರಲ್ಲಿ ನಾನು ಕೇಂದ್ರದ ಭೂಸಾರಿಗೆ ಸಚಿವನಾಗಿ ಅನುಭವ ಇರುವುದರಿಂದ ರಸ್ತೆಗಳ ನಿರ್ಮಾಣದಲ್ಲಿ ಗುಣಮಟ್ಟ ಹಾಗೂ ಇನ್ನಿತರೆ ಸ್ಥಳಗಳಿಗೆ ಸಂಪರ್ಕವಾಗುವ ರೀತಿ ಕ್ರಿಯಾ ಯೋಜನೆಮಾಡಿ ನನ್ನ ಗಮನಕ್ಕೆ ತಂದು ಜಾರಿಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ ಇಲಾಖೆ ರೈತರಿಗೆ ಗೊಬ್ಬರ, ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಿಸಬೇಕು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net