ಕಳಪೆ ಕಾಮಗಾರಿ ಮಾಡಿದ್ರೆ ಗುತ್ತಿಗೆದಾರರೇ ಹೊಣೆ

mkg
Published on

ಹೊನ್ನಾಳಿ: ಸರ್ಕಾರಿ ಕಾಮಗಾರಿಗಳ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿಯನ್ನು ಮತ್ತೊಬ್ಬರಿಗೆ ವಹಿಸದೆ ಅವರೇ ನಡೆಸಬೇಕು. ಒಂದುವೇಳೆ ಕಾಮಗಾರಿ ಕಳಪೆಯಾದರೆ ಮೂಲ ಗುತ್ತಿಗೆದಾರರೇ ಸಂಪೂರ್ಣ ಹೊಣೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.

ತಾಪಂ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊದಲ ತ್ರೈಮಾಸಿಕ ಕೆಡಿಪಿ ಸಭೆ ಉದ್ಘಾಟಿಸಿ ಮಾತನಾಡಿದರು.

ಕೆಲ ಗುತ್ತಿಗೆದಾರರು ಸರ್ಕಾರದ ಅನುದಾನಗಳಿಗೆ ಟೆಂಡರ್ ಹಾಕಿ ಅದನ್ನು ತಾವು ನಿರ್ವಹಿಸದೆ ಬೇರೆಯವರಿಗೆ ಕೊಡುತ್ತಾರೆ. ಹಾಗಾಗಿ, ಕಳಪೆ ಕಾಮಗಾರಿ ಜತೆಗೆ ಆರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿಗಳ ಸಂಖ್ಯೆ ಹೆಚ್ಚಾಗಿವೆ. ಇಂತಹ ಘಟನೆಗಳು ನಮ್ಮ ಅಧಿಕಾರಾವಧಿಯಲ್ಲಿ ನಡೆಯದಂತೆ ಅಧಿಕಾರಿಗಳು, ಟೆಂಡರ್ ಕರೆದ ಗುತ್ತಿಗೆದಾರನಿಂದಲೇ ಕೆಲಸ ಮಾಡಿಸಬೇಕು ಎಂದು ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೃತ್ಯುಂಜಯ ಸ್ವಾಮಿ ಮಾತನಾಡಿ, ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ ತಲಾ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಸತಿ ನಿಲಯಗಳ ಮೇಲ್ಚಾವಣೆ ಸೋರುತ್ತಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು.

ವಸತಿ ನಿಲಯಗಳು ನಿರ್ಮಾಣಗೊಂಡು ಉದ್ಘಾಟನೆಯಾಗಿ ವರ್ಷ ಕಳೆದಿಲ್ಲ. ಇದೀಗ ಸೊರುತ್ತಿರುವುದು ಆಚ್ಚರಿ ಸಂಗತಿ. ಇದರ ಕಾಮಗಾರಿ ನಿರ್ವಹಿಸಿದವರು ಸಂಪೂರ್ಣ ಹೊಣೆ ಹೊತ್ತು ಈ ಕೂಡಲೇ ಸರಿಪಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ತುಂಗಭದ್ರಾ ನದಿ ಸೇತುವೆ ಇಕ್ಕೆಲಗಳಲ್ಲಿ ಆಳೆತ್ತರದ ಗಿಡ ಬೆಳೆದು ಸೇತುವೆ ಅಪಾಯದ ಪರಿಸ್ಥಿತಿಯಲ್ಲಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವ ಬಗ್ಗೆ ಶಾಸಕರ ಗಮನ ಸೆಳೆದಾಗ, ಕೂಡಲೇ ಗಿಡ ತೆರವುಗೊಳಿಸಬೇಕು ಎಂದರು.

ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಶೇ.75ರಷ್ಟು ಮಳೆ ಕೊರತೆಯಾಗಿದ್ದು, ಅವಳಿ ತಾಲೂಕುಗಳಲ್ಲಿ ಈಗಾಗಲೇ ಗ್ರಾಮವಾರು ಬೆಳೆ ಹಾನಿ ಮಾಹಿತಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು. ಇನ್ನು ಬೆಳೆ ವಿಮೆ ಪರಿಹಾರದ ಬಗ್ಗೆ ಗ್ರಾಮ ಸಭೆ ನಡೆಸಲಾಗುವುದು ಎಂದು.ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಕುರಿತು ಸಭೆಯಲ್ಲಿ ಶಾಸಕರಿಗೆ ಮಾಹಿತಿ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ, ತಾಪಂ ಆಡಳಿತಾಧಿಕಾರಿ ಶ್ರೀನಿವಾಸ ಚಿಂತಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net