ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

New Project (10)
Published on

ಸುಳ್ಯ: ಅಕ್ರಮ-ಸಕ್ರಮಕ್ಕೆ ಸಲ್ಲಿಸಿದ ಅರ್ಜಿಗಳನ್ನು ಅಕ್ರಮ-ಸಕ್ರಮ ಸಮಿತಿಯಲ್ಲಿ ಚರ್ಚಿಸಿದ ಬಳಿಕವಷ್ಟೇ ವಿಲೇವಾರಿ ಮಾಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ತಹಸೀಲ್ದಾರ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸುಳ್ಯ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಳ್ಯ ತಾಲೂಕಿನಲ್ಲಿ ಅಕ್ರಮ-ಸಕ್ರಮ ಸಭೆ ನಡೆಯುತ್ತಿಲ್ಲ. ಸಲ್ಲಿಸಲಾದ ಅರ್ಜಿ ಸಮಿತಿ ಮುಂದೆ ಬಾರದೇ ತಿರಸ್ಕಾರ ಮಾಡಲಾಗುತ್ತಿದೆ ಎಂದು ಸದಸ್ಯರಾದ ಅಶ್ರಫ್ ಗುಂಡಿ, ಧರ್ಮಪಾಲ ಕೊಯಿಂಗಾಜೆ, ಜಯಪ್ರಕಾಶ್ ನೆಕ್ರಪ್ಪಾಡಿ ಮತ್ತಿತರರು ಸಭೆ ಗಮನಕ್ಕೆ ತಂದರು. ಈ ಕುರಿತು ಚರ್ಚೆ ನಡೆದು ಅಕ್ರಮ-ಸಕ್ರಮ ಸಮಿತಿ ಮುಂದೆ ಬಾರದೆ, ಕೂಲಂಕುಷವಾಗಿ ಪರಿಶೀಲನೆ ಮಾಡದೆ ಅರ್ಜಿ ತಿರಸ್ಕರಿಸಬಾರದು. 94ಸಿ ಅರ್ಜಿ ವಿಲೇವಾರಿ ಮಾಡುವಾಗ ಬಡವರಿಗೆ ಅನ್ಯಾಯವಾಗಬಾರದೆಂದು ಹೇಳಿದರು.

ಜಲಜೀವನ್‌ಮಿಷನ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಕಾಮಗಾರಿ ಆದಷ್ಟು ಬೇಗ ಪೂರ್ತಿ ಮಾಡುವಂತೆ ಸೂಚಿಸಿದರು. ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಚರ್ಚೆ ನಡೆಯಿತು. ಕಾಮಗಾರಿ ನಿರ್ಮಿತಿ ಕೇಂದ್ರದಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಿದ್ದು, ಕಾಮಗಾರಿ ಪೂರ್ತಿಗೊಳಿಸಲು 5.5 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಅನುದಾನ ಬಿಡುಗಡೆಗೆ ಸಂಬಂಧಪಟ್ಟ ಸಚಿವರಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸುಳ್ಯದಲ್ಲಿ ಒಂದಂಕಿ ಲಾಟರಿ ದಂಧೆ ನಡೆಯುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಹೇಳಿದಾಗ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಹಸೀಲ್ದಾರ್ ಮಂಜುಳಾ ಎಂ., ಕೆಡಿಪಿ ಸದಸ್ಯರಾದ ಅಶ್ರಫ್ ಗುಂಡಿ, ಧರ್ಮಪಾಲ ಕೊಯಿಂಗಾಜೆ, ಜಯಪ್ರಕಾಶ್ ನೆಕ್ರಪ್ಪಾಡಿ, ತೀರ್ಥರಾಮ ಜಾಲ್ಸೂರು, ಶಕುಂತಳಾ ನಾಗರಾಜ್, ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net