

ಹೊಸಪೇಟೆ: ನೂತನ ವಿಜಯನಗರ ಸಮಸ್ಯೆಗಳನ್ನು ಅರಿಯುವ ಉದ್ದೇಶದಿಂದ ಇಂದಿನಿಂದ ತಾಲೂಕುವಾರು ಕೆಡಿಪಿ ಸಭೆ ಕೈಗೊಂಡಿದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹೊಸ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಪ್ರತಿ ತಾಲ್ಲೂಕಿನ ಕೆಡಿಪಿ ಸಭೆ ನಡೆಸಿ ವಾಸ್ತವ ಅರಿತು ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಕಳೆದ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ 19 ಇಲಾಖೆಗಳ ಕಚೇರಿಗಳು ಇರಲಿಲ್ಲ. ಇದೀಗ 11 ಕಚೇರಿ ಸ್ಥಾಪಿಸಲಾಗಿದೆ. ಅಗತ್ಯ ಸಿಬ್ಬಂದಿ ಸಹ ನೇಮಿಸಲಾಗುವುದು ಎಂದು ತಿಳಿಸಿದರು.
ಮೆಡಿಕಲ್ ಕಾಲೇಜು ಸೇರಿದಂತೆ ಹೊಸ ಜಿಲ್ಲೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗುವುದು. ಸಕ್ಕರೆ ಕಾರ್ಖಾನೆ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ತಾಲ್ಲೂಕು ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಆರಂಭಿ ಸಲಾಗಿರುವ ಸಿಬ್ಬಂದಿ ಹಾಜರಾತಿ ಬಯೋಮೆಟ್ರಿಕ್ ವ್ಯವಸ್ಥೆಯ ಇ ಕಚೇರಿ, 11 ಇಲಾಖಾ ಕಚೇರಿ ಗಳಿಗೆ ಚಾಲನೆ ನೀಡಿದರು
ಮಾಜಿ ಶಾಸಕ ಸಿರಾಜ್ ಶೇಕ್, ಜಿಲ್ಲಾಧಿಕಾರಿ ದಿವಾಕರ್, ಹೆಚ್ಚುವರಿ ಡಿಸಿ ಅನುರಾಧ, ಎಸ್ ಪಿ ಹರಿಬಾಬು, ತಹಸೀಲ್ದಾರ್ ಮೆಹತಾ, ಮುಖಂಡ ಇಮಾಮ್ ನಿಯಾಜಿ ಉಪಸ್ಥಿತರಿದ್ದರು.
ಬಾಪೂಜಿ ಪ್ರತಿಮೆಗೆ ಮಾಲಾರ್ಪಣೆ:
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬುಧವಾರ ಬೆಳಗ್ಗೆ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಅಂಗವಾಗಿ ರಾಷ್ಟ್ರ ಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವಿವಿಧ ಕಾಮಗಾರಿಗಳ ಪರಿಶೀಲನೆ: ಇದೇ ವೇಳೆ ತಾಲೂಕು ಕಚೇರಿಯಲ್ಲಿ ಹೊಸದಾಗಿ ಆರಂಭಿಸಿರುವ ವಿವಿಧ ಇಲಾಖೆ, ನಿಗಮಗಳ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ 250 ಬೆಡ್ ಆಸ್ಪತ್ರೆ, ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ನಿಲಯ ಕಟ್ಟಡಗಳ ಕಾಮಗಾರಿಯನ್ನು ಪರಿಶೀಲಿಸಿದರು.