ಸೋಮವಾರಪೇಟೆ : ಸಮೀಪದ ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರಪೇಟೆ ಇನ್ನರ್‌ವ್ಹೀಲ್ ಕ್ಲಬ್ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಬಾಣಂತಿಯರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಕ್ಲಬ್ ಅಧ್ಯಕ್ಷೆ ಸಂಗೀತಾ ದಿನೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗರಿಷ್ಠ ಸಮಯ ಸ್ತನ್ಯಪಾನ ಮಾಡಿಸುವುದು ಮಗು ಮತ್ತು ತಾಯಿ ಇಬ್ಬರ ಆರೋಗ್ಯ ದೃಷ್ಟಿಯಿಂದಲೂ ಬಹಳ ಒಳ್ಳೆಯದು ಎಂದರು. ತಾಯಿಯ ಹಾಲಿನಿಂದ ಯಾವುದೇ ಮಗು ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಬಾಣಂತಿಯರು ವೈದ್ಯರ ಸಲಹೆಯಂತೆ ಹಾಲುಣಿಸಬೇಕು. ಪೌಷ್ಟಿಕ ಆಹಾರ ಸೇವಿಸಿ ಅರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು. ಡಾ.ಚಾರುಮತಿ ಬಾಣಂತಿಯರಿಗೆ ಹಲವು ಉಪಯುಕ್ತ ಸಲಹೆ ನೀಡಿದರು.