

ಸೋಮವಾರಪೇಟೆ : ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಗುವಿನ ಮಹತ್ವ ತಿಳಿಸುವ ಕಾರ್ಯ ಹೆಚ್ಚಾಗಬೇಕು ಎಂದು
ಶಿಶು ಅಭಿವೃದ್ಧಿಯೋಜನಾ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಹೇಳಿದರು. ಜಿಲ್ಲಾ ಆಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೇಟಿ ಬಚಾವೋ-ಬೇಟಿ ಪಡಾವೋ ಆಂದೋಲನದ ನಿಮಿತ್ತ ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.
ಹೆಣ್ಣು ಮಗು ಜನಿಸಿದ ಮನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ತೆರಳಿ ಒಂದು ಗುಲಾಬಿ ಹೂ ನೀಡುವ ಮೂಲಕ ಹೆಣ್ಣಿನ ಮಹತ್ವವನ್ನು ತಿಳಿಸಬೇಕು. ಇದರಿಂದ ಪಾಲಕರು ಹೆಣ್ಣುಮಕ್ಕಳ ಬಗೆಗಿನ ನಕಾರಾತ್ಮಕ ಭಾವನೆಯಿಂದ ಹೊರ ಬರುತ್ತಾರೆ. ಮುಂಬರುವ ದಿನಗಳಲ್ಲಿ ಸಾಮಾಜಿಕ ಸುಧಾರಣೆ ಕಾಣಲೂ ಇದು ಸ್ಫೂರ್ತಿ ನೀಡಲಿದೆ ಎಂದರು.
ಪ್ರೋತ್ಸಾಹಿಸುವ ಕಾರ್ಯ ಮಾಡಿ: ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗಳಿಂದಲೇ ಆರಂಭ ಆಗಬೇಕಾಗಿದೆ. ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಅಂಗವಾನವಾಡಿ ಕಾರ್ಯಕರ್ತೆಯರು ಮಾಡಬೇಕಾಗಿದೆ ಎಂದು ಸಾವಿತ್ರವ್ವ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಪನ್ಮೂಲ ವ್ಯಕ್ತಿ ಎಸ್.ಆರ್ ಕೇಶಿನಿ ಮಾತನಾಡಿ, ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಬೇಟಿ ಬಚಾವೋ-ಬೇಟಿ ಪಡಾವೋ ಆಂದೋಲನವು ಹೆಣ್ಣುಮಕ್ಕಳು ಮತ್ತು ಮಹಿಳೆಯರು ಶಿಕ್ಷಣಮಟ್ಟ ಏರಿಸಲು ನೆರವಾಗಲಿದೆ ಎಂದರು. ಹಳ್ಳಿಗಾಡಿನ ಮಹಿಳೆಯರು ಓದುವ ಹಾಗು ಬರೆಯುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಎಲ್ಲಾ ವರ್ಗದವರೊಂದಿಗೆ ಬೆರೆಯುವ ಮತ್ತು ಇತರರೊಂದಿಗೆ ಸಂವಹನ ನಡೆಸಲು ನೆರವಾಗುತ್ತದೆ. ಬದುಕಿನ ಗುರಿ ಸಾಧನೆಗೆ ಸಾಮರ್ಥ್ಯ ವೃದ್ಧಿಸುತ್ತದೆ. ಸಮುದಾಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದಕ್ಷತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸಾಕ್ಷರತಾ ಮಹತ್ವ ತಿಳಿಸುವ ಕೆಲಸವೂ ಹೆಚ್ಚಾಗಬೇಕು ಎಂದು ಕೇಶಿನಿ ಆಶಿಸಿದರು.
ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕಿ ನವ್ಯಾ, ಪೋಷಣ್ ಅಭಿಯಾನದ ತಾಲೂಕು ಸಂಯೋಜಕಿ ರಂಜಿತಾ ಹಾಜರಿದ್ದರು. ಸೋಮವಾರಪೇಟೆ ತಾಲೂಕಿನ ಗೌಡಳ್ಳಿ, ಕೊಡ್ಲಿಪೇಟೆ, ಸುಂಟಿಕೊಪ್ಪ, ಶನಿವಾರಸಂತೆಯ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.