

ಕೊಳ್ಳೇಗಾಲ : ತೆಳ್ಳನೂರು-ಬಂಡಳ್ಳಿ ರಸ್ತೆಯಲ್ಲಿ ಬಸ್ ಉರುಳಿದ ಪರಿಣಾಮ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಮಂಗಳವಾರ ಸಂಜೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧನ ಸಹಾಯ ಮಾಡಿದರು.
ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ದೈರ್ಯ ತುಂಬಿದರು. ನಂತರ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಬಸ್ ಚಾಲಕನ ಅಜಾಗ ರೂಕತೆಯಿಂದ ಅನಾಹುತ ಸಂಭವಿಸಿದೆ. ವಿಧಾನಸಭೆ ಅಧಿವೇಶನದಲ್ಲಿದ್ದ ಕಾರಣ ಗಾಯಾಳುಗಳನ್ನು ಭೇಟಿ ಮಾಡುವುದು ತಡವಾಗಿದೆ. ಆದರೆ, ಆರೋಗ್ಯ ಅಧಿಕಾರಿಗಳಿಂದ ಎಲ್ಲ ಮಾಹಿತಿಯನ್ನು ಪಡೆದಿದ್ದೇನೆ. ಮೃತಪಟ್ಟ ಬಸ್ ಕಂಡಕ್ಟರ್ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಅಜಾಗರೂಕತೆ ಹಾಗೂ ಅತಿವೇಗ ಚಾಲನೆಯಿಂದಾಗಿ ಅಪಘಾತ ಸಂಭವಿಸುತ್ತಿದೆ ವಾಹನ ಚಾಲಕರು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಇಂತಹ ಅಪಘಾತಗಳನ್ನು ನಿಯಂತ್ರಿಸಬಹುದು. ಮೃತಪಟ್ಟ ಕಂಡಕ್ಟರ್ ಕುಟುಂಬಕ್ಕೆ ವಿಮೆ ಸೌಲಭ್ಯದ ಮೂಲಕ ನೆರವಾಗುವ ನಿಟ್ಟಿನಲ್ಲಿ ಕ್ರಮವಹಿಸುವೆ ಎಂದರು.