ಬಾಳೆಲೆಯಲ್ಲಿ ರೈತರ ಜಾಗೃತಿ ಕಾರ್ಯಕ್ರಮ

31 gkp 02.
Published on

ಗೋಣಿಕೊಪ್ಪಲು: ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬಾಳೆಲೆಯಲ್ಲಿ ‘ತಂತ್ರಜ್ಞಾನದಿಂದ ರೈತರ ಶಕ್ತೀಕರಣ’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸಿದರು.

ಗ್ರಾಮದ ಗದ್ದೆಗಳಲ್ಲಿ ಕಾರ್ಯಕ್ರಮ ನಡೆಸಿದ ವಿದ್ಯಾರ್ಥಿಗಳು, ವಿವಿಧ ಮೊಬೈಲ್ ಆ್ಯಪ್‌ಗಳನ್ನು ಪರಿಚಯಿಸಿ, ಇದನ್ನು ಕೃಷಿ ಕ್ಷೇತ್ರದಲ್ಲಿ ಹೇಗೆ ಬಳಸಬಹುದು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಿಂದ ಆಗುವ ಪ್ರಯೋಜನ ಮತ್ತು ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಮೊಬೈಲ್ ಆ್ಯಪ್‌ಗಳು ಕೃಷಿ ಕಾರ್ಯ ಸರಳೀಕರಣ ದೊಂದಿಗೆ ಫಸಲು ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ರೈತರಿಗೆ ವಿದ್ಯಾರ್ಥಿಗಳು ವಿವರಿಸಿದರು. ತಂತ್ರಜ್ಞಾನ ಬಳಸಿ ಕೃಷಿಯಲ್ಲಿ ಲಾಭ ಗಳಿಸುವ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲು ವಿದ್ಯಾರ್ಥಿಗಳು ಆಕರ್ಷಕ ಪೋಸ್ಟರ್‌ಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು. ಲ್ಯಾಪ್‌ಟಾಪ್‌ಗಳ ಮೂಲಕ ನೇರ ಪ್ರದರ್ಶನಗಳನ್ನು ಕೃಷಿಕರಿಗೆ ತೋರಿಸಿದರು. ಗದ್ದೆಗಳಲ್ಲಿ ನೀರು ತುಂಬಿಸಿ ಮಣ್ಣು ಮಿಶ್ರಣ ಮಾಡುವ ಕಾರ್ಯದಲ್ಲೂ ಪಾಲ್ಗೊಂಡ ವಿದ್ಯಾರ್ಥಿಗಳು ರೈತರ ಹಿತಕ್ಕಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದು ಗಮನ ಸೆಳೆಯಿತು. ಗ್ರಾಮಾಭಿವೃದ್ಧಿ ಚಟುವಟಿಕೆ ಅಡಿಯಲ್ಲಿ ಇನ್ನೂ ಅನೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲೂ ರೈತರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net