ಮೊಟ್ಟೆ ಎಸೆತಗಾರರ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

19mdka1 - Copy
Published on

ಮಡಿಕೇರಿ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆದಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಮೊಟ್ಟೆ ಎಸೆತ, ಕಪ್ಪುಬಾವುಟ ಪ್ರದರ್ಶನ, ಸಂಚಾರಕ್ಕೆ ಅಡ್ಡಿ ಪಡಿಸಿರುವುದು ಬಿಜೆಪಿ ಸರ್ಕಾರದ ಪ್ರಾಯೋಜಿತ ಸಂಚಾಗಿದೆ. ಪೊಲೀಸರು ಸಂಘ ಪರಿವಾರ ಹಾಗೂ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ. ಪ್ರತಿಪಕ್ಷ ನಾಯಕರನ್ನು ನೆರಳಿನ ಮುಖ್ಯಮಂತ್ರಿ ಎಂದು ಕರೆಯ ಲಾಗುತ್ತದೆ. ಆದರೆ, ಅವರಿಗೆ ಸೂಕ್ತ ಭದ್ರತೆ ದೊರೆಯಲಿಲ್ಲ ಎಂದು ಧರ್ಮಜ ಉತ್ತಪ್ಪ ಅಸಮಾಧಾನ ವ್ಯಕ್ತ ಪಡಿಸಿದರು.

ಮುತ್ಸದಿ ನಾಯಕರ ಮೇಲೆ ಮೊಟ್ಟೆ ಎಸೆಯುವ ಪ್ರಯತ್ನ ಮಾಡಿದವರು ದುಷ್ಕರ್ಮಿಗಳು. ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವ ಅವಕಾಶ ಇತ್ತು. ಅದನ್ನು ಪೊಲೀಸ್ ಇಲಾಖೆ ಮಾಡಲಿಲ್ಲ. ಈ ಘಟನೆಗೆ ಕೊಡಗಿನ ಶಾಸಕರ ಕೈವಾಡ ಇದೆ ಎಂದು ಆರೋಪಿಸಿದರು.

ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ, ಸ್ವಾತಂತ್ರೃಕ್ಕಾಗಿ ಹೋರಾಡಿದ ಕಾಂಗ್ರೆಸ್ಸಿಗರನ್ನು ಬ್ರಿಟಿಷರು ಬಂಧಿಸಿ ಹೋರಾಟ ಹತ್ತಿಕ್ಕುವ ಯತ್ನ ಮಾಡಿದ್ದರು. ಇದೀಗ ಪೊಲೀಸರು ನಮ್ಮ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಬ್ರಿಟಿಪ್ ಅಡಳಿತ ನೆನಪಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಪೊಲೀಸ್ ಇಲಾಖೆಗೆ ನೈತಿಕತೆ ಇದ್ದರೆ ಮೊಟ್ಟೆ ಎಸೆದವರನ್ನು ಬಂಧಿಸಬೇಕು. ತಿತಿಮತಿಯಲ್ಲಿ ಸಿದ್ದರಾಮಯ್ಯ ಅವರಿದ್ದ ವಾಹನ ನಿಧಾನ ಮಾಡಿಸುವ ಯತ್ನವಾಗಿತ್ತು. ಈ ಸಂದರ್ಭ ಸಿದ್ದರಾಮಯ್ಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಸಾಧ್ಯತೆಯೂ ಇತ್ತು. ಬಿಜೆಪಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಪೊಲೀಸ್ ಇಲಾಖೆಯನ್ನು ಸ್ವಾತಂತ್ರೃವಾಗಿ ಕಾರ್ಯನಿರ್ವಹಣೆ ಮಾಡಲು ಬಿಡುತ್ತಿಲ್ಲ. ಆ.೨೬ ರಂದು ಕೊಡಗು ಚಲೋ ಮೂಲಕ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ ಎಂದರು.

ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ಗುರುವಾರ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ದ್ದಂತೆ ಪೊಲೀಸರು ೩೦೭ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬೇಕಾಗಿತ್ತು. ಪೊಲೀಸರು ದಾಖಲಿಸಿರುವ ದಾಖಲಿಸಿರುವ ಪ್ರಕರಣದಲ್ಲಿ ಈ ಸೆಕ್ಷನ್ ಕೈಬಿಡಲಾಗಿದೆ. ಪ್ರತಿಪಕ್ಷ ನಾಯಕರಿಗೆ ಸಿಗಬೇಕಾದ ಭದ್ರತೆ ದೊರೆತ್ತಿಲ್ಲ. ಕೊಡಗಿನ ಹೆಸರನ್ನು ಬಿಜೆಪಿ ಹಾಳು ಮಾಡಿದೆ. ಪ್ರತಿಭಟನೆಗೆ ಮುನ್ನವೇ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕಾಗಿತ್ತೆಂದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಕೊಡಗಿನ ಮಾರ್ಯದೆ ಹಾಳು ಮಾಡುವ ಕೆಲಸ ಬಿಜೆಪಿಯಿಂದ ಆಗಿದೆ. ಈ ಘಟನೆ ಹಿಂದೆ ಸಂಸದ ಪ್ರತಾಪ್ ಸಿಂಹ ಅವರ ಪಾತ್ರವಿದೆ. ಮೈಸೂರಿನಿಂದ ಜನರನ್ನು ಕಳುಹಿಸಿಕೊಟ್ಟ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ತನಿಖೆ ಕೈಗೊಳ್ಳ ಬೇಕೆಂದರು.

ಆ.೨೬ ರಂದು ನಡೆಯುವ ಹೋರಾಟಕ್ಕೆ ಕಾಂಗ್ರೆಸ್ಸಿನ ೭೦ ಎಂಎಲ್‌ಎ, ೨೦ ಎಂಎಲ್ಸಿಗಳು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೆವಾಲ ಆಗಮಿಸಲಿದ್ದಾರೆ.

ಪ್ರತಾಪ್ ಸಿಂಹ ಸುಳ್ಳು ಹೇಳುವುದರಲ್ಲಿ ಮೋದಿಯನ್ನು ಮೀರಿಸುತ್ತಾರೆ. ಮೈಸೂರು ಅರಮನೆ ಕಟ್ಟಿದ್ದು ನಾನೇ ಅಂತಾ ಬೇಕಾದರು ಹೇಳುತ್ತಾರೆ. ಅಭಿವೃದ್ಧಿ ಬಗ್ಗೆ ಚರ್ಚೆಗೆ ಆಹ್ವಾನ ನೀಡಿದರೆ ಬರಲು ಹಿಂದೇಟು ಹಾಕುತ್ತಾರೆ. ಆದರೆ, ಸುಳ್ಳು ಮಾತ್ರ ಸಖತ್ತಾಗಿ ಹೇಳುತ್ತಾರೆಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಯಚ್ಯ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಪಿ. ರಮೇಶ್, ಕೆ.ಕೆ. ಮಂಜುನಾಥ್‌ಕುಮಾರ್, ಎಂಎಲ್ಸಿ ಚುನಾವಣೆಯಲ್ಲಿ ಪರಾಜಿತ ಡಾ.ಮಂಥರ್‌ಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಮುಡಿ ಹಂಸ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ವಕ್ತಾರರಾದ ವಿ.ಪಿ. ಶಶಿಧರ್, ನೆರವಂಡ ಉಮೇಶ್ ಮತ್ತಿತರರು ಇದ್ದರು.

ಕ್ರಮದ ಭರವಸೆ ನೀಡಿದ ಎಸ್ಪಿ
ಮೊಟ್ಟೆ ಎಸೆತ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಭರವಸೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಈ ಘಟನೆ ನಡೆಯಬಾರದಿತ್ತು. ಪೊಲೀಸ್ ಇಲಾಖೆ ಯಾವುದೇ ನಿರ್ಲಕ್ಷೃ ವಹಿಸಿಲ್ಲ. ಪ್ರತಿಪಕ್ಷ ನಾಯಕರಿಗೆ ಸೂಕ್ತ ಭದ್ರತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಮಾಜಿ ಮುಖ್ಯಮಂತ್ರಿಗೆ ಝೆಡ್ ಪ್ಲಸ್ ಭದ್ರತೆ ಇರುತ್ತದೆ. ಈ ಘಟನೆ ನಾವು ಕೂಡ ಒಪ್ಪಲ್ಲ. ಮಡಿಕೇರಿ ಹಾಗೂ ಕುಶಾಲನಗರದಲ್ಲಿ ಪ್ರಕರಣ ದಾಖಲಾಗಿದೆ. ಬಂಧಿಸಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.

ಈ ಸಂದರ್ಭ ಪ್ರತಿಭಟನಾನಿರತರು ಸೆಕ್ಷನ್ ೩೦೭ ಅಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ಮುನ್ನೆಚ್ಚರಿಕೆ ಇದ್ದರು ಬಂಧಿಸದಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net