ಹುಬ್ಬಳ್ಳಿ: ಭೂಸ್ವಾಧಿನದಿಂದ ಹಿಂದೆ ಸರಿದಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಉದ್ದೇಶಿತ ದೇವನಹಳ್ಳಿ ಏರೊಸ್ಪೇಸ್ ಪಾರ್ಕ್ಅನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮನವಿ ಮಾಡಿದೆ.
ಏರೊಸ್ಪೇಸ್ ಪಾರ್ಕ್ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ ಅಥವಾ ಬೆಳಗಾವಿಯಲ್ಲಿ ಆರಂಭಿಸುವುದರಿಂದ ಕರ್ನಾಟಕದ ಉತ್ತರ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ. ಇದರಿಂದ ಸಾವಿರಾರು ಜನರಿಗೆ ಪ್ರತ್ಯ ಹಾಗೂ ಪರೋವಾಗಿ ಉದ್ಯೋಗಗಳು ದೊರೆತು ವಿಶೇಷವಾಗಿ ಇಂಜಿನಿಯರಿಂಗ್ ತಾಂತ್ರಿಕ ಕ್ಷೇತ್ರಗಳಲ್ಲಿಯೂ ಅವಕಾಶಗಳು ಹೆಚ್ಚಲಿವೆ.
ಪಾರ್ಕ್ ಸುತ್ತಲಿನ ಪ್ರದೇಶದಲ್ಲಿ ವಸತಿ, ಮಾಲ್, ಹೊಟೇಲ್, ಗೋದಾಮು, ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಅಭಿವೃದ್ಧಿಯಾಗುವುದರ ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಅವಕಾಶ ದೊರೆಯಲಿದೆ.
ಏರೊಸ್ಪೇಸ್ ಪಾರ್ಕ್‌ನ ಮೂಲಕ ಅಂತಾರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರುತ್ತವೆ. ಬೆಂಗಳೂರು ಕೇಂದ್ರಿತ ಕೈಗಾರಿಕೆ ವಿಸ್ತರಣೆ ಬದಲು ಉತ್ತರ ಕರ್ನಾಟಕದ ಕಡೆ ಗಮನ ಹರಿಸಿ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ ಮುಂತಾದ ನಗರಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಬೇಕು.
ಸ್ವದೇಶಿ ಯುದ್ಧ ವಿಮಾನ ಭಾಗಗಳ ತಯಾರಿಕೆ, ತಂತ್ರಜ್ಞಾನ ಸಂಶೋಧನೆಗೆ ನೆರವು ದೊರೆತು ಆತ್ಮನಿರ್ಭರ ಭಾರತ ಕಾರ್ಯಕ್ರಮಕ್ಕೆ ಪೂರಕವಾಗಲಿದೆ. ಅಲ್ಲದೇ ಪ್ರಾದೇಶಿಕ ಅಸಮತೋಲನ ನಿವಾರಣೆ, ಉದ್ಯೋಗಾವಕಾಶ, ಶಿಕ್ಷಣ ಮಟ್ಟದ ಏರಿಕೆಗೂ ಸಹ ಕಾರಣವಾಗಿ ಒಟ್ಟಾರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬುನಾದಿಯಾಗಲಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ಭೂ ಬ್ಯಾಂಕ್, ಸರ್ಕಾರಿ ಭೂಮಿ ಇದೆ. ಬೇಲೂರು ಕೈಗಾರಿಕಾ ವಲಯದಲ್ಲಿ ಏರೊಸ್ಪೇಸ್ ಸ್ಥಾಪನೆಗೆ ಅನುಕೂಲಕರ ವಾತಾವರಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಈ ಭಾಗದ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನ ಮಾಡಬೇಕೆಂದು ಕೆಸಿಸಿಐ ಅಧ್ಯ ಎಸ್.ಪಿ. ಸಂಶಿಮಠ, ಉಪಾಧ್ಯರಾದ ಸಂದೀಪ ಬಿಡಸಾರಿಯಾ, ಪ್ರವಿಣ ಅಗಡಿ, ವಿರೇಶ ಮೊಟಗಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಇವರು ವಿನಂತಿಸಿದ್ದಾರೆ.