

ಹುಬ್ಬಳ್ಳಿ: ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಸಬಲೀಕರಣಗೊಳಿಸುವ ಸಲುವಾಗಿ "ಚೇತರಿಸಿಕೊಳ್ಳುವ ಸಂಸ್ಥೆಗಾಗಿ ತಂತ್ರಗಳು' ಎಂಬ ವಿಚಾರ ಸಂಕಿರಣವನ್ನು ನಗರದ ಡೆನಿಸನ್ಸ್ ಹೋಟೆಲ್ ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಎಸ್ಎಂಬಿ ಕನೆಕ್ಟ್ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಸೆಮಿನಾರ್ ನಲ್ಲಿ ಪ್ರಾಸ್ತಾವಿಕ ಮಾತನಾಡಿದ ಅಧ್ಯಕ್ಷ ಎಸ್.ಪಿ. ಸಂಶಿಮಠ ಅವರು, ಎಂಎಸ್ಎಂಇ ಮತ್ತು ಎಸ್ಎಂಇಗಳನ್ನು ಸಲಹಾ ಸೇವೆ, ಕೌಶಲ ಅಭಿವೃದ್ಧಿ, ಆಥಿರ್ಕ ನೆರವು, ತಂತ್ರಜ್ಞಾನ, ಮಾರುಕಟ್ಟೆ ಸಂಪರ್ಕಗಳ ಮೂಲಕ ಬೆಂಬಲಿಸಲು ಸಂಸ್ಥೆಯು ಶ್ರಮಿಸುತ್ತಿದೆ ಎಂದರು.
ಸಣ್ಣ ಉದ್ಯಮಗಳ ಪೋಷಣೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ಸ್ಥಿತಿಸ್ಥಾಪಕತ್ವವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಎಸ್ಎಂಬಿ ಕನೆಕ್ಟ್ ನಿರ್ದೇಶಕ ಸಂದೀಪನ್ ರೇ ಅವರು ಮಾತನಾಡಿ, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ತಮ್ಮ ಕಂಪನಿಯು ಪ್ರಯತ್ನ ನಡೆಸುತ್ತಿದೆ ಎಂದರು.
ಮೈಕ್ರೋಸ್ಟಾ್ ಪ್ರೊಡಕ್ಟ್ ಸ್ಪೆಷಲಿಸ್ಟ್ ಶ್ರೇಯಾ ಭಾರದ್ವಾಜ್, ಕೃತಕ ಬುದ್ದಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಸಾಮರ್ಥ್ಯದ ಕುರಿತು ವಿವರಿಸಿದರು.
ಸ್ಟಾರ್ಟ್ಅಪ್ ಪರಿಣಿತ ಶ್ಯಾಮ್ ಶೇಖರ್ ಅವರು, ಸಾಂಸ್ಥಿಕ ಸ್ಥಿತಿಸ್ಥಾಪಕತ್ವಕ್ಕಾಗಿ ಡಿಜಿಟಲ್ ರೂಪಾಂತರ ತಂತ್ರಗಳು ಅಗತ್ಯ ಎಂದರು.
ಫೆಬಲ್ ಸ್ಕೇರ್ ಸಹ ಸಂಸ್ಥಾಪಕ ಮಯೂರ್ ಭಟ್, ಅಂಬಿಕಾ ಯಾದವ್ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಎಸ್ಎಂಇ, ಎಂಎಸ್ಎಂಇಗಳಿಗೆ ದೀರ್ಘಾವಧಿಯಲ್ಲಿ ಅಭಿವದ್ಧಿ ಹೊಂದುವ ಸಾಮರ್ಥ್ಯ ಕ್ರಿಯಾಶೀಲತೆಯ ಬಗ್ಗೆ ವಿವರ ಮಾಹಿತಿಯನ್ನು ಇಲ್ಲಿ ಒದಗಿಸಲಾಯಿತು.
ಉದ್ಯಮಗಳಲ್ಲಿ ಉನ್ನತ ಸಾಧನೆ ಮಾಡಿದ ಮೈಕ್ರೋಫಿನಿಶ್ ವಾಲ್ವ ಎಂಡಿ ತಿಲಕ್ ವಿಕಮ್ಸಿ, ಪಾಟೀಲ್ ಇಲೆಕ್ಟ್ರಿಕಲ್ ವರ್ಕ್ಸ್ ಪ್ರಸಾದ್ ಪಾಟೀಲ, ಸ್ಕೆಟೆಕ್ ಇಂಜಿನಿಯರಿಂಗ್ನ ನಾಗರಾಜ್ ಯಲಿಗಾರ್, ಸ್ವಸ್ತಿಕ್ ವೈರ್ ಇಂಡಸ್ಟ್ರೀಸ್ನ ವಿಕ್ರಮ್ ಜೈನ್, ಗದಗನ ವಿಜಯನಿಧಿ ಅಗ್ರೋ ಇಂಡಸ್ಟ್ರೀಸ್ನ ಎಂಡಿ ಶರಣಬಸಪ್ಪ ಗುಡಿಮನಿ ಇವರನ್ನು ಸನ್ಮಾನಿಸಲಾಯಿತು.
ಕೆಸಿಸಿಐ ಉಪಾಧ್ಯ ವೀರೇಶ ಮೋಟಗಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಇತರರು ಉಪಸ್ಥಿತರಿದ್ದರು.