

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ 3 ವಿಸ್ತರಣೆ ಯೋಜನೆಗಳಾದ ಹುಬ್ಬಳ್ಳಿಯಿಂದ ಮುಂಬೈ, ಜೋಧಪುರ, ಅಹಮದಾಬಾದ್ ಮತ್ತು ಕೊಚ್ಚಿಯಂಥ ಸ್ಥಳಗಳಿಗೆ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಿಮಾನಗಳನ್ನು ಮರು ಪ್ರಾರಂಭಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಪದಾಧಿಕಾರಿಗಳು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಶನಿವಾರ ನಗರದಲ್ಲಿ ಮನವಿ ಸಲ್ಲಿಸಿದರು.
ಸಚಿವರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದ ನಂತರ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಬೆಳಗಾವಿ-ಸೂರತ್ ವಿಮಾನ ಸೇವೆ ಆರಂಭಿಸಬೇಕು. ಇಂಡಿಗೋದಿಂದ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಹಿಂತೆಗೆದುಕೊಳ್ಳಲಾಗಿದೆ. ಸ್ಟಾರ್ ಏರ್ ವಿಮಾನಗಳ ಕೊನೆಯ ನಿಮಿಷದ ರದ್ದತಿಯಿಂದ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಅಹಮದಾಬಾದ್, ಗೋವಾ, ಮುಂಬೈ, ಬೆಂಗಳೂರು, ಹಿಂಡನ್ (ದೆಹಲಿ) ಮತ್ತು ತಿರುಪತಿಯಂಥ ನಗರಗಳಿಗೆ ವಿಮಾನಗಳನ್ನು ಮರು ಆರಂಭಿಸಬೇಕು. ಅಳ್ನಾವರ ರೈಲ್ವೆ ನಿಲ್ದಾಣದಲ್ಲಿ ಪ್ರಸ್ತಾವಿತ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕು. ಹುಬ್ಬಳ್ಳಿ-ಅಂಕೋಲಾ ಹಾಗೂ ಹುಬ್ಬಳ್ಳಿ-ಬೆಳಗಾವಿ (ವಯಾ ಕಿತ್ತೂರ) ರೈಲ್ವೆ ಲೈನ್ ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಎಂದು ವಿನಂತಿಸಿದರು. ಮನವಿ ಸ್ವೀಕರಿಸಿದ ಸಚಿವರು, ಈ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಕಾರ್ಯದರ್ಶಿಗಳಾದ ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ, ಸದಸ್ಯ ಚೆನ್ನು ಹೊಸಮನಿ ಇತರರು ಇದ್ದರು.