

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಪದಾಧಿಕಾರಿಗಳು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಭೇಟಿ ಮಾಡಿ ಈ ಭಾಗದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಎಫ್ಎಂಸಿಜಿ ಕ್ಲಸ್ಟರ್ ಅಭಿವೃದ್ಧಿ, ಯೋಜನೆಯಡಿ ಸ್ಥಳಿಯ ಉತ್ಪಾದಕರಿಗೆ ಸೂಕ್ತ ಮೂಲಸೌಕರ್ಯ, ಪ್ಯಾಕೇಜಿಂಗ್, ಸಂಗ್ರಹಣಾ ಮತ್ತು ಮಾರಾಟ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ಉದ್ದೇಶ ಹೊಂದಿದೆ. ತಾವು ಈ ಕ್ಲಸ್ಟರ್ ದಲ್ಲಿ ಇನ್ನೂ ಹೆಚ್ಚು ಬೃಹತ್ ಉದ್ದಿಮೆದಾರರನ್ನು ಆಕರ್ಷಿಸಲು ಸಾಧ್ಯವಿರುವ ರಿಯಾಯಿತಿ ದರದ ಭೂಮಿ, ವಿದ್ಯುತ್ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ವಿಶೇಷ ಆಸಕ್ತಿ ವಹಿಸಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಕೋರಲಾಯಿತು.
ನನೆಗುದಿಗೆ ಬಿದ್ದಿರುವ ಹಾಗೂ ಆಗಬೇಕಾಗಿರುವ ಹೊಸ ರೈಲ್ವೆ ಯೋಜನೆಗಳನ್ನು ಹಾಗೂ ಹುಬ್ಬಳ್ಳಿಯಿಂದ ಅಹಮದಾಬಾದ, ಜೋಧಪುರ, ಉದಯಪುರ, ತಿರುಪತಿ, ವಾರಣಾಸಿ ಹಾಗೂ ಅಯೋಧ್ಯೆ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೊಸ ವಿಮಾನ ಯಾನ ಪ್ರಾರಂಭಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಸಹ ಮನವಿ ಮಾಡಲಾಯಿತು.
ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಉಪಾಧ್ಯಕ್ಷರಾದ ಪ್ರವಿಣ ಅಗಡಿ, ಸಿದ್ದೇಶ್ವರ ಕಮ್ಮಾರ ಮತ್ತು ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ ಹಾಗೂ ಮಾಜಿ ಅಧ್ಯಕ್ಷ ವಿನಯ ಜವಳಿ ಉಪಸ್ಥಿತರಿದ್ದರು.