ಕೆಸಿಸಿಐ ನೂತನ ಅಧ್ಯಕ್ಷರಾಗಿ ಸಂಶಿಮಠ, ಉಪಾಧ್ಯಕ್ಷರಾಗಿ ಬಿಡಸಾರಿಯಾ

NEW SANSHIMATHA
Published on

ಹುಬ್ಬಳ್ಳಿ : ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ (ಕೆಸಿಸಿಐ) ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗದಗ ವ್ಯಾಪಾರಸ್ಥ ಎಸ್.ಪಿ. ಸಂಶಿಮಠ ಹಾಗೂ ಮೊದಲ ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ಸಂದೀಪ ಬಿಡಸಾರಿಯಾ ಆಯ್ಕೆಗೊಂಡಿದ್ದಾರೆ.

ಸಂಸ್ಥೆಯ ಹಾಲಿ ಅಧ್ಯಕ್ಷ ವಿನಯ ಜವಳಿ ಹಾಗೂ ಉಪಾಧ್ಯಕ್ಷ ಎಸ್.ಪಿ. ಸಂಶಿಮಠ ಅವರ ಅಧಿಕಾರದ ಅವಧಿ ಸೆ. 30ರಂದು ಪೂರ್ಣಗೊಳ್ಳಲಿದೆ. ಹಾಲಿ ಉಪಾಧ್ಯಕ್ಷ ಎಸ್.ಪಿ. ಸಂಶಿಮಠ ಅವರೇ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ನೂತನ ಅಧ್ಯಕ್ಷ ಎಸ್.ಪಿ. ಸಂಶಿಮಠ ಹಾಗೂ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಅವರು ಅಕ್ಟೋಬರ್ 1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರದ್ದು ಎರಡು ವರ್ಷದ ಅಧಿಕಾರ ಅವಧಿ ಇರಲಿದೆ.

ಒಟ್ಟು 18 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ 737 ಮತದಾರರು ಇದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಗದಗನ ಎಸ್.ಪಿ. ಸಂಶಿಮಠ ಅವರು 393ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದರು. ಇವರ ಪ್ರತಿಸ್ಪರ್ಧಿ ಜಿ.ಕೆ. ಆದಪ್ಪಗೌಡರ 335 ಪಡೆದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹುಬ್ಬಳ್ಳಿಯ ಸಂದೀಪ ಬಿಡಸಾರಿಯಾ 591 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಉಮೇಶ ಗಡ್ಡದ 124 ಮತ ಪಡೆದರು.

ನಿಯೋಜಿತ ಅಧ್ಯಕ್ಷ ಎಸ್.ಪಿ. ಸಂಶಿಮಠ ಅವರು ಮೂಲತಃ ಚಹಾಪುಡಿ ಉದ್ಯಮಿ. ಇವರ ತಂದೆ ಪಂಚಾಕ್ಷರಯ್ಯ ಅವರು 1956ರಲ್ಲಿ ಗದಗ ಟೀ ಡಿಪೋ ಪ್ರಾರಂಭಿಸಿದ್ದರು. 1973ರಲ್ಲಿ ಎಸ್.ಪಿ. ಸಂಶಿಮಠ ಅವರು ತಮ್ಮ ತಂದೆಯ ವ್ಯಾಪಾರಕ್ಕೆ ಕೈ ಜೋಡಿಸಿದರು. ನಂತರ 1976ರಲ್ಲಿ ಗದಗನಲ್ಲಿ ಮೆ. ಸಂಶಿಮಠ ಆಂಡ್ ಕೊ. ಕಲರ್ಡ್ ಬಿಸಿನೆಸ್, 1983ರಲ್ಲಿ ಹುಬ್ಬಳ್ಳಿಯಲ್ಲಿ ಮೆ. ಸಂಶಿಮಠ ಮುನವಳ್ಳಿ ಆಂಡ್ ಕಂಪನಿ, 1986ರಲ್ಲಿ ದಾವಣಗೆರೆಯಲ್ಲಿ ಮೆ. ಸಂಶಿಮಠ ಟೀ ಕಂಪನಿ ಪ್ರಾರಂಭಿಸಿದರು. ಬೆಂಗಳೂರಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.

ನಿಯೋಜಿತ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಅವರು ಸ್ಟೀಲ್ ಉದ್ಯಮಿ. ಅಮೆರಿಕ ನ್ಯೂಜರ್ಸಿಯ ಯುನಿಸಿಸ್ ಕಾರ್ಪ್​ನ ಹಣಕಾಸು ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕೈಗಾರಿಕೆ ಸಮಿತಿಗಳ ರಫ್ತು ಉಪ ಸಮಿತಿಯ ಅಧ್ಯಕ್ಷರಾಗಿ, ಉತ್ತರ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರಾಗಿ, ಹುಬ್ಬಳ್ಳಿ ಟೈನ 2017 ಮತ್ತು 2018ನೇ ಸಾಲಿನ ಅಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಸಂಸ್ಥೆಯ ಹಾಲಿ ಅಧ್ಯಕ್ಷ ವಿನಯ ಜವಳಿ, ಉಪಾಧ್ಯಕ್ಷ ಎಸ್.ಪಿ. ಸಂಶಿಮಠ, ಸಂದೀಪ ಬಿಡಸಾರಿಯಾ, ಮಹೇಂದ್ರ ಲದ್ಡಡ, ರಮೇಶ ಪಾಟೀಲ, ವಸಂತ ಲದ್ವಾ ಹಾಗೂ ಮತ್ತಿತರ ಗಣ್ಯರು ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net