ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಕೆಸಿಸಿಐ ಒತ್ತಾಯ

pb new
Published on

ಹುಬ್ಬಳ್ಳಿ : ರಾಜ್ಯ ಸರ್ಕಾರ ಏಕಾಏಕಿ 1 ಲೀಟರ್ ಪೆಟ್ರೋಲ್​ಗೆ 3 ರೂ. ಮತ್ತು ಡೀಸೆಲ್​ಗೆ 3.50 ರೂ. ಏರಿಕೆ ಮಾಡಿರುವುದು ಆಘಾತವನ್ನುಂಟು ಮಾಡಿದೆ. ಈ ದರ ಜನಸಾಮಾನ್ಯರಿಗೆ ಹೊರೆಯಾಗಿದ್ದು, ತಕ್ಷಣ ಇಳಿಕೆ ಮಾಡಬೇಕು ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಒತ್ತಾಯಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಿಸಿರುವುದರಿಂದ ಒಂದು ಲೀಟರ್ ಪೆಟ್ರೋಲ್ ದರ 103 ರೂ. ಹಾಗೂ ಡೀಸೆಲ್ ದರ 89.20 ರೂ. ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರವು ಪೆಟ್ರೋಲ್ ಮೇಲೆ ಮಾರಾಟ ತೆರಿಗೆಯನ್ನು ಶೇ. 25.92 ರಿಂದ ಶೇ. 29.84 ಹಾಗೂ ಡಿಸೇಲ್ ಮೇಲೆ ಶೇ. 14.3 ರಿಂದ ಶೇ. 18.4ರಷ್ಟು ಹೆಚ್ಚಳ ಮಾಡಿರುವುದರಿಂದ ನೇರವಾಗಿ ಜನಸಾಮಾನ್ಯರಿಗೆ ಹಾಗೂ ಜೀವನಾವಶ್ಯಕ ವಸ್ತುಗಳಿಗೆ ಏರಿಕೆಯ ಬಿಸಿ ತಟ್ಟುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ವಿದ್ಯುತ್, ಆಸ್ತಿ ತೆರಿಗೆ, ಮುದ್ರಾಂಕ ಶುಲ್ಕ, ಅಬಕಾರಿ ಸುಂಕ ಹಾಗೂ ವಾಣಿಜ್ಯ ತೆರಿಗೆ ಹೆಚ್ಚಿಸಿರುವುದರಿಂದ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆಯಾಗಿದೆ. ಈಗ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳದಿಂದ ವಿಶೇಷವಾಗಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳ ಬಳಕೆ ಮಾಡುವವರಿದ್ದು, ನೇರವಾಗಿ ಜನಸಾಮಾನ್ಯರಿಗೆ ಇದರ ಹೊರೆ ತಟ್ಟುತ್ತದೆ ಎಂದಿದ್ದಾರೆ.

ತೈಲ ಬೆಲೆ ಹೆಚ್ಚಳದಿಂದ ಸಾಗಣೆ ವೆಚ್ಚ ಹೆಚ್ಚಲಿದ್ದು, ನಿತ್ಯದ ವಸ್ತುಗಳ ಬೆಲೆಗಳು ಕೂಡ ಹೆಚ್ಚಳವಾಗುತ್ತವೆ. ಇದು ಸಾರ್ವಜನಿಕರ ಮೇಲೆ ಗದಾ ಪ್ರಹಾರ ಮಾಡಿದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಮಾರಾಟ ತೆರಿಗೆ ದರವನ್ನು ಕಡಿಮೆ ಮಾಡಿದಲ್ಲಿ ಜನಸಾಮಾನ್ಯರಿಗೆ ಸ್ವಲ್ಪ ಅನುಕೂಲವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣಗಳಲ್ಲಿ ಪೆಟ್ರೋಲ್ ಮತ್ತು ಡಿಜೇಲ್ ಬೆಲೆ ಬಹಳ ಕಡಿಮೆ ಇದೆ. ಅದರಂತೆ ಕರ್ನಾಟಕದಲ್ಲಿಯೂ ಜಾರಿ ಮಾಡಿರುವ ಮಾರಾಟ ತೆರಿಗೆಯ ದರವನ್ನು ಕಡಿಮೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net