

ಹುಬ್ಬಳ್ಳಿ: ನಮ್ಮ ಆರ್ಥಿಕತೆ ಡೆಡ್ ಎಕನಾಮಿ ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಭಾರತೀಯರು ಕಿವಿಗೊಡಬೇಕಾಗಿಲ್ಲ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆ ನಮ್ಮದಾಗಿದೆ. ಮುಂದಿನ ಆರು ವರ್ಷದಲ್ಲಿ ಎಂಟು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ದೇಶ ಹೊಂದಲಿದೆ ಎಂದು ಜತೆ ಎಸ್ ಡಬ್ಲೂ ಸಿಮೆಂಟ್, ಪೇಂಟ್ಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜತೆ ಎಸ್ ಡಬ್ಲೂ ಎನರ್ಜಿ ನಿರ್ದೇಶಕ ಪಾರ್ಥ ಜಿಂದಾಲ್ ಹೇಳಿದರು.
ಇಲ್ಲಿಯ ಎಪಿಎಂಸಿ ಬಳಿಯ ಹುಧಾ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) 97ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಸಾಧಕರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
2047ರ ವೇಳೆಗೆ ವಿಕಸಿತ ಭಾರತದ ಆಶಯ ಹೊಂದಿರುವ ಪ್ರಧಾನಿ ಮೋದಿ ಅವರ ಕನಸು ನನಸು ಮಾಡಲು ಕೃಷಿ ಹಾಗೂ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಹೂಡಿಕೆ ಆಗಬೇಕಿದೆ. ಶೇ. 75ರಷ್ಟು ಯುವಶಕ್ತಿ ಹೊಂದಿರುವ ಭಾರತದಲ್ಲಿ ಪ್ರತಿ ವರ್ಷ 20 ಲಕ್ಷದಷ್ಟು ಉದ್ಯೋಗ ಸೃಷ್ಟಿಸಬೇಕಾದ ಅಗತ್ಯವಿದೆ. ಜಿಡಿಪಿ ಹಲವು ಪಟ್ಟು ಅಧಿಕವಾಗಬೇಕಾದರೆ ಉತ್ಪಾದನೆಗೆ ಬಲ ತುಂಬಬೇಕಾಗಿದೆ. ಭಾರತವು ಅತಿ ಹೆಚ್ಚು ಸ್ಟೀಲ್ ಬಳಸುವ ದೇಶವಾಗಿದೆ. ಇದರಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.
ಉದ್ಯಮ ವಲಯ ದೊಡ್ಡ ಕನಸು, ವಿಶಾಲ ಆಲೋಚನೆಗಳನ್ನು ಹೊಂದಿರಬೇಕು. ನಮ್ಮ ತಂದೆ ಸಜ್ಜನ್ ಜಿಂದಾಲ್ ಅವರು ಸ್ಟೀಲ್ ಫ್ಯಾಕ್ಟರಿ ಸ್ಥಾಪಿಸುವಾಗ ಕೇವಲ ನೂರು ಕೋಟಿ ವಹಿವಾಟು ಇತ್ತು. ಆದರೆ, 10 ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ಕೇಳಿದ್ದರು. ಅವರ ಮೇಲೆ ವಿಶ್ವಾಸವಿಟ್ಟು ಫಂಡಿಂಗ್ ಮಾಡಿದ್ದರಿಂದ ಅದ್ವೀತಿಯ ಸಾಧನೆ ಸಾಧ್ಯವಾಯಿತು ಎಂದರು.
ಕೃಷ್ಣದೇವರಾಯರು ಆಳ್ವಿಕೆ ಮಾಡಿದ ವಿಜಯನಗರ, ಹನುಮಂತ ದೇವರ ನಾಡು ನಮಗೆ ಅದೃಷ್ಟದ ನೆಲವಾಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಪ್ರಾಶಸ್ತ್ಯ ನೀಡಲಾಗುವುದು. ಶೈಕ್ಷಣಿಕ ಹಬ್ ಆಗಿ ಬೆಳೆದಿರುವ ಹುಬ್ಬಳ್ಳಿಯು ಹಲವು ಅವಕಾಶಗಳಿರುವ ಅದ್ಭುತ ನಗರವಾಗಿದೆ ಎಂದು ಹೇಳಿದರು.
ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮಾತನಾಡಿ, ನಾನು ಅಧ್ಯಕ್ಷನಾಗಿದ್ದ ಕೆಸಿಸಿಐ ಸಂಸ್ಥಾಪನ ದಿನಾಚರಣೆಗೆ ಪಾರ್ಥ ಅವರ ತಂದೆ ಸಜ್ಜನ್ ಜಿಂದಾಲ್ ಅವರನ್ನು ಕರೆಸಲಾಗಿತ್ತು. ಆಗ ಹುಬ್ಬಳ್ಳಿಗೆ ರಿಟೇಲ್ ಶಾಪ್ ಅನುಮತಿ ಕೊಟ್ಟಿದ್ದರು. ಈಗ ಅವರ ಪುತ್ರ ಬಂದಿರುವುದು ಹೆಮ್ಮೆಯ ವಿಷಯ. ಸಂಸ್ಥೆಯು ತನ್ನದೇ ಆದ ಹಿರಿಮೆ ಹೊಂದಿದ್ದು, ವ್ಯಾಪಾರೋದ್ಯಮ ಅಷ್ಟೇ ಅಲ್ಲ ಈ ಭಾಗದ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದೆ ಎಂದರು.
ರಾಜ್ಯದ 23 ಜಿಲ್ಲೆಗಳಿಂದ ಇದಕ್ಕೆ ಪ್ರತಿನಿಧಿಗಳು ಇದ್ದಾರೆ. ಇದೇ ಸಂಸ್ಥೆ ಬೆಂಗಳೂರಿನಲ್ಲಿ ಇದ್ದಿದ್ದರೆ ದೊಡ್ಡ ಪ್ರಮಾಣದಲ್ಲಿ ಗುರುತಿಸಲ್ಪಡುತ್ತಿತ್ತು. ಹುಬ್ಬಳ್ಳಿಯಲ್ಲಿ ಇದ್ದಿದ್ದಕ್ಕೆ ನಿರ್ಲಕ್ಷ್ಯ ಕ್ಕೆ ಒಳಗಾಗಿದೆ. ಆದಾಗ್ಯೂ ರಾಜ್ಯ ಹಾಗೂ ಕೇಂದ್ರ ಬಜೆಟ್ ಸಂದರ್ಭದಲ್ಲಿ ಸಲಹೆ ಸೂಚನೆ ನೀಡುತ್ತ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ವಾಣಿಜ್ಯ ರತ್ನ ಪ್ರದಾನ:
ಸಾಧಕ ವಾಣಿಜ್ಯೋದ್ಯಮಿಗಳಾದ ಬೆಳಗಾವಿಯ ಜಯಂತ ಹುಂಬರವಾಡಿ, ಹುಬ್ಬಳ್ಳಿಯ ಪ್ರಕಾಶ ಬಾಣಾ, ಕಲಬುರಗಿಯ ರವೀಂದ್ರಕುಮಾರ ಬೆಕನಾಳ, ಗದಗನ ಶರಣಬಸಪ್ಪ ಗುಡಿಮನಿ, ಕೊಪ್ಪಳದ ಸಿದ್ದಣ್ಣ ನಾಲ್ವಾಡ, ಹುಬ್ಬಳ್ಳಿಯ ದೇವಕಿ ಯೋಗಾನಂದ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥಾಪಕರಾದ ಮುರಗಯ್ಯಸ್ವಾಮಿ ಜಂಗಿನ ಅವರ ಕುಟುಂಬದವರಿಗೆ ಗೌರವ ಸಲ್ಲಿಸಲಾಯಿತು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಸ್ವಾಗತಿಸಿದರು. ಸಂಸ್ಥಾಪನ ದಿನಾಚರಣೆ ಸಮಿತಿ ಚೇರ್ಮನ್ ಪ್ರಕಾಶ ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕ ಮಾತನಾಡಿದರು. ಕೆಸಿಸಿಐ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಸಂಸ್ಥೆ ನಡೆದು ಬಂದ ದಾರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಪ್ರವಿಣ ಅಗಡಿ ಅತಿಥಿಗಳ ಪರಿಚಯ ಮಾಡಿದರು.
ಮಾಜಿ ಅಧ್ಯಕ್ಷರಾದ ವಿ.ಪಿ. ಲಿಂಗನಗೌಡರ, ಎಂ.ಸಿ. ಹಿರೇಮಠ, ವಸಂತ ಲದ್ವಾ, ರಮೇಶ ಪಾಟೀಲ, ಮಹೇಂದ್ರ ಲದ್ದಡ, ವಿನಯ ಜವಳಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಇತರರು ಇದ್ದರು.