

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 96ನೇ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ. 10ರಂದು ಸಂಜೆ 5 ಗಂಟೆಗೆ ಡೆನಿಸನ್ಸ್ ಹೊಟೇಲ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರ್ಮನ್ ಶಶಿಧರ ಶೆಟ್ಟರ್ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯ ಬಿಡಿಕೆ ವಾಲ್ವ್ ಪ್ರೖೆ ಲಿಮಿಟೆಡ್ನ ಬಿಮಲ್ ಮೆಹ್ತಾ, ವನೆಸನ್ಸ್ ಗ್ರುಪ್ನ ಜಯಂತಿಲಾಲ ಕಟಾರಿಯಾ, ಬ್ಯಾಡಗಿಯ ಬಿ.ಎಂ. ಚತ್ರದ, ಮುದ್ದೇಬಿಹಾಳದ ಶ್ರೀ ಸಾಯಿನಾಥ ದಾಲ್ ಇಂಡಸ್ಟ್ರೀಸ್ನ ಶರಣಪ್ಪ ಸಜ್ಜನ, ಗೋಕಾಕನ ಮೆ. ನಿಬಾಜಿಯ ಕಾಟನ್ ಇಂಡಸ್ಟ್ರೀಸ್ನ ಸುನಿಲ್ ಶಹಾ ಹಾಗೂ ಶಿವಮೊಗ್ಗದ ಎಸ್ಎನ್ಎಸ್ ಅಲಾಯ್ ಕಾಸ್ಟಿಂಗ್ಸ್ನ ಸಹನಾ ಇ.ವಿ. ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಲಾಗುವುದು. ಬಳ್ಳಾರಿಯ ಆದಿತ್ಯಾ ಟೆಕ್ಸ್ಟೈಲ್ ಪಾರ್ಕ್ ಪ್ರೖೆ. ಲಿಮಿಟೆಡ್ನ ಜಿ. ಮಲ್ಲಿಕಾರ್ಜುನ ಗೌಡ ಅವರಿಗೆ ನವೋದ್ಯಮಿ ಪ್ರಶಸ್ತಿ ವಿತರಿಸಲಾಗುವುದು ಎಂದು ಹೇಳಿದರು.
ಎಚ್ಸಿಎಲ್ ಸಹ ಸಂಸ್ಥಾಪಕ ಪದ್ಮಭೂಷಣ ಪುರಸ್ಕೃತ ಡಾ. ಅಜಯ ಚೌಧರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ಒಂದುಗೂಡಿ ಸ್ಥಾಪಿಸಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಇಂದು ಉತ್ತರ ಕರ್ನಾಟಕ ಭಾಗದ ವ್ಯಾಪಾರ, ಉದ್ದಿಮೆಗಳ ಹಿತಾಸಕ್ತಿಯನ್ನು ಕಾಪಾಡುವ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದರು.
11ರಂದು ಅಭಿವೃದ್ಧಿ ಸಭೆ:
ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಪ್ರದೇಶದಲ್ಲಿ ಇಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಅಭಿವೃದ್ಧಿ ಕುರಿತು ಸಂಸ್ಥೆಯ ವತಿಯಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದೊಂದಿಗೆ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಉದ್ಯಮಿಗಳೊಂದಿಗೆ ಆ. 11ರಂದು ಬೆಳಗ್ಗೆ 8.30ಕ್ಕೆ ಹೋಟೆಲ್ ಡೆನಿಸನ್ಸ್ನಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ತಿಳಿಸಿದರು.
ಈ ಭಾಗದಲ್ಲಿ ಇಲೆಕ್ಟ್ರಾನಿಕ್ಸ್ ಉತ್ಪಾದನೆಯ ಭವಿಷ್ಯವನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ. ಇಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ನಲ್ಲಿರುವ ಅವಕಾಶಗಳು ಮತ್ತು ಪ್ರವೃತ್ತಿಗಳ ಕುರಿತು ಎಚ್ಸಿಎಲ್ನ ಸಹ ಸಂಸ್ಥಾಪಕ ಡಾ. ಅಜಯ ಚೌಧುರಿ ಭಾಷಣ ಮಾಡುವರು. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಇಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಅಭಿವೃದ್ಧಿ ಕುರಿತು ವಿಶೇಷ ಆಸಕ್ತಿ ಗುಂಪು ರಚಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ಕಾರ್ಯದರ್ಶಿ ರವೀಂದ್ರ ಬಳಿಗಾರ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಇತರರು ಇದ್ದರು.