

ಗುತ್ತಲ: ಶೀಘ್ರದಲ್ಲಿಯೇ ಕೆಸಿಸಿ ಬ್ಯಾಂಕ್ನ ಪ್ರಾದೇಶಿಕ ಶಾಖೆ ಹಾವೇರಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಹಾವೇರಿ ರಸ್ತೆಯಲ್ಲಿರುವ ಕೆಸಿಸಿ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಹಾಗೂ ಕೌಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 10-15 ದಿನಗಳಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬದಲಾಗಿ ಕೆಸಿಸಿ ಬ್ಯಾಂಕ್ನ ನೂತನ ಪ್ರಾದೇಶಿಕ ಕಚೇರಿ ಆರಂಭವಾಗಲಿದೆ. ಜಿಲ್ಲೆಯ 227 ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಸುಮಾರು 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಶೇ. 3ರ ಬಡ್ಡಿ ದರದಲ್ಲಿ ರೈತರಿಗೆ ಟ್ರಾ್ಯಕ್ಟರ್ಗಳನ್ನು ವಿತರಿಸಲಾಗುತ್ತಿದ್ದು, ಹಾವನೂರ ಶಾಖೆಯಿಂದ ಈ ವರ್ಷ ಸುಮಾರು 5 ಟ್ರ್ಯಾಕ್ಟರ್ಗಳನ್ನು ನೀಡಿದ್ದೇವೆ. ನಬಾರ್ಡ್ ಬ್ಯಾಂಕ್ ನೂತನ ಬಡ್ಡಿ ದರ ನಿಗದಿ ಪಡಿಸಿದ ತಕ್ಷಣವೇ ಸಾಲ ನೀಡಲಾಗುವುದು ಎಂದರು.
ಗುತ್ತಲದ ನೂತನ ಶಾಖೆಗೆ ಸ್ಥಳೀಯ ವಿಎಸ್ಎಸ್ನವರು ಸುಸಜ್ಜಿತ ಕಟ್ಟಡ ನೀಡಿದ್ದರಿಂದ ಜನರಿಗೆ ಅನುಕೂಲವಾಗಿದೆ. ಕೆಸಿಸಿ ಬ್ಯಾಂಕ್ನಲ್ಲಿ ಶೇ. 9.25 ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ನೀಡಲಾಗುತ್ತಿದೆ ಎಂದರು.
ವಿಧಾನ ಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಗುತ್ತಲ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ನೂತನ ಯೋಜನೆ ಮಂಜೂರಿಯಾಗಿದ್ದು, ಮುಂದಿನ ದಿನಗಳಲ್ಲಿ 24/7 ಮಾದರಿ ನೀರು ದೊರೆಯಲಿದೆ. ಗುತ್ತಲ ಪಟ್ಟಣ ಪಂಚಾಯಿತಿಗೆ ನೂತನ ಕಟ್ಟಡ ನಿರ್ವಣವಾಗುತ್ತಿದ್ದು, 2ನೇ ಹಂತದ ಕಾಮಗಾರಿಗೆ ಈಗಷ್ಟೇ 1.27 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದೆ ಎಂದರು.
ಜಿಪಂ ಮಾಜಿ ಸದಸ್ಯ ಸಿ.ಬಿ ಕುರವತ್ತಿಗೌಡರ, ಪಿಕೆಪಿಎಸ್ ಅಧ್ಯಕ್ಷ ಭರಮಪ್ಪ ಹಾದಿಮನಿ, ಉಪಾಧ್ಯಕ್ಷ ಕೋಟೆಪ್ಪ ಗೊರವರ, ಪಪಂ ಮಾಜಿ ಉಪಾಧ್ಯಕ್ಷ ನಾಗರಾಜ ಎರಿಮನಿ, ಕೆಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ರಂಜನ ಪೋಳ್, ಬ್ಯಾಂಕ್ನ ನೋಡಲ್ ಅಧಿಕಾರಿ ಮಹರಾಜ, ಡಿಸಿಒ ರುದ್ರಪ್ಪ ಅಂತ್ರದ, ನಿರೀಕ್ಷಕರಾದ ವಿ.ಎಸ್. ರಿತ್ತಿಗಾಣಗೇರ, ಎ.ಎಂ. ಸೂಲಿ, ಶಾಖಾ ವ್ಯವಸ್ಥಾಪಕ ಸಿ.ಎಂ. ಬಾವಿಕಟ್ಟಿ, ಕ್ಲರ್ಕ್ ಭೀಮಸಿಂಗ್ ರಜಪೂತ, ಇತರರಿದ್ದರು.