ಕೆಸಿಸಿ ಬ್ಯಾಂಕ್ ಚುನಾವಣೆ: ಮಾಜಿ ಅಧ್ಯಕ್ಷರಿಗೆ ಸೋಲು

we
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅವಿಭಿಜಿತ ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಲಿ. ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅವಿರೋಧ ಆಯ್ಕೆಯಾಗಿದ್ದರೆ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಉಪಾಧ್ಯಕ್ಷ ಸೋಲು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ನವಲಗುಂದ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಪುಗೌಡ ದೇಸಾಯಿಗೌಡ ಪಾಟೀಲ, ರೋಣ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈರನಗೌಡ ಸಂಗನಗೌಡ ಪಾಟೀಲ (ಐ.ಎಸ್. ಪಾಟೀಲ) ಸೋಲು ಕಂಡಿದ್ದಾರೆ. ಇನ್ನು ಹಾಲಿ ಮಂಡಳಿಗೆ ಉಪಾಧ್ಯಕ್ಷರಾಗಿದ್ದ, ಸವಣೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೇಖರಗೌಡ ಯಲ್ಲಪ್ಪಗೌಡ ಪಾಟೀಲ ಸೋಲು ಕಂಡಿದ್ದಾರೆ.
ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಈವರೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಬಾಪುಗೌಡ ಪಾಟೀಲ ಸ್ಪರ್ಧೆ ನಡೆಸಿ ಗೆಲುವು ಸಾಧಿಸುತ್ತಲೇ ಬಂದಿದ್ದರು. ಕಳೆದ ಚುನಾವಣೆಯಲ್ಲೂ ಗೆಲುವು ಸಾಧಿಸಿ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದರು. ಸುಮಾರು ಎರಡೂವರೆ ವರ್ಷ ಆಡಳಿತ ನಡೆಸಿದ್ದ ಅವರು, ರಾಜ್ಯ ರಾಜಕಾರಣದ ಅನಿರೀಕ್ಷಿತ ಬೆಳವಣಿಗೆಯಿಂದ ಅಧಿಕಾರದಿಂದ ಕೆಳಗಿಳಿಯುವಂತಾಗಿತ್ತು. ಬಳಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಲ್ಲಿಕಾರ್ಜುನ ಹೊರಕೇರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಬಾಪುರಗೌಡ ಪಾಟೀಲ (17 ಮತ) ಅವರು ನಾಗಪ್ಪ ಬಸವಣ್ಣೆಪ್ಪ ಸಂಕದ (24) ಎದುರು 7 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಇದಲ್ಲದೆ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಸೋಲು ಕಂಡಿದ್ದಾರೆ. ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ (17) ಅವರು ಗದಿಗೆಪ್ಪಗೌಡ ಪರ್ವತಗೌಡ ಪಾಟೀಲ (21) 4 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಮಾಜಿ ಅಧ್ಯಕ್ಷರು ತೀವ್ರ ಪೈಪೋಟಿ ನೀಡಿ ಸೋಲು ಅನುಭವಿಸಿದ್ದರೆ, ಹಾಲಿ ಉಪಾಧ್ಯಕ್ಷರು ಹೀನಾಯವಾಗಿ ಸೋಲು ಕಂಡಿದ್ದಾರೆ. ಉಪಾಧ್ಯಕ್ಷ ಶೇಖರಗೌಡ ಯಲ್ಲಪ್ಪಗೌಡ ಪಾಟೀಲ (5) ಅವರು ಸುಭಾಷ ಮುದಕಪ್ಪ ಗಡೆಪ್ಪನವರ (16) ವಿರುದ್ಧ 11 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಇಂತಹ ಅವಾಂತರ ಸಂಭವಿಸುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಸಹ ಈ ಬಾರಿ ನಡೆದಿವೆ. ಕೆಲ ಅಭ್ಯರ್ಥಿಗಳು 2-3 ದಿನಗಳ ಕಾಲ ಮತದಾರರನ್ನು ಪ್ರತ್ಯೇಕ ಸ್ಥಳಗಳಲ್ಲಿ ಇರಿಸಿಕೊಂಡು ಶನಿವಾರ ಬೆಳಗ್ಗೆ ನೇರವಾಗಿ ಮತದಾನ ಸ್ಥಳಕ್ಕೆ ಕರೆ ತಂದಿದ್ದಾರೆ ಎಂಬ ಮಾತುಗಳು ಸಾಕಷ್ಟು ಕೇಳಿ ಬರುತ್ತಿವೆ.

ಚುನಾವಣೆಯಲ್ಲಿ ಬಿಜೆಪಿ ಮೇಲುಗೈಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಯ 20 ಸ್ಥಾನಗಳ ಪೈಕಿ 14 ಸ್ಥಾನಗಳ ಫಲಿತಾಂಶ ಹೊರ ಬಿದಿದ್ದರೆ, 6 ಸ್ಥಾನಗಳ ಫಲಿತಾಂಶ ಘೋಷಣೆಗೆ ತಡೆ ಇದೆ. ಸದ್ಯದ ಫಲಿತಾಂಶದ ಲೆಕ್ಕಾಚಾರದಲ್ಲಿ 9 ಅಭ್ಯರ್ಥಿಗಳು ಬಿಜೆಪಿ ಬೆಂಬಲಿತರಾಗಿದ್ದರೆ, ಐವರು ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ ಎನ್ನಲಾಗಿದೆ. ಬಾಕಿ ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರು ಕನಿಷ್ಠ 2 ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಈ ಬಾರಿ ಸಹ ಬಿಜೆಪಿ ಹಿಡಿತದಲ್ಲೇ ಕೆಸಿಸಿ ಬ್ಯಾಂಕ್ ಎಂಬ ಮಾತು ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net