

ಜೆ.ಜಿ.ಶ್ರೀನಿವಾಸಮೂರ್ತಿ ಬೇತಮಂಗಲ
ಕೆಜಿಎಫ್ ಹೆಸರು ವಿಶ್ವಭೂಪಟದಲ್ಲಿ ಸ್ಥಾನ ಪಡೆದಿದೆಯಾದರೂ ಅಭಿವೃದ್ಧಿ, ಅನುದಾನ, ಯೋಜನೆಗಳ ವಿಷಯದಲ್ಲಿ ಅದ್ಯಾಕೋ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲೂ ಕಾಣಿಸಿಕೊಳ್ಳದಿರುವುದು ಬೇಸರದ ಸಂಗತಿ.
ಕೆಸಿ ವ್ಯಾಲಿ ಯೋಜನೆಯಡಿ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸುವ ಲೆಕ್ಕದಲ್ಲಿ ಕೆಜಿಎಫ್ ತಾಲೂಕಿನಲ್ಲಿ ಎರಡು ಕೆರೆಗಳ ಹೆಸರನ್ನು ಸೇರಿಸಲಾಗಿದೆ. ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಈ ತಾಲೂಕಿಗೆ ತಲುಪುವುದೇ ದುಸ್ತರ ಎನ್ನುವಂತಾಗಿದ್ದು, ಆ ಪೈಕಿ ಈ ಭಾಗದ ಜನರು ಕಾತುರದಿಂದ ಕಾಯುತ್ತಿರುವ ಕೆಸಿ ವ್ಯಾಲಿ ಯೋಜನೆ ನೀರು ಹರಿದು ಬರುವುದೂ ಅನುಮಾನವಾಗಿದೆ.
ಕುಂಟುತ್ತಲೇ ಹರಿಯುತ್ತಿದೆ ನೀರು: ತಾಲೂಕಿನ ಅತಿದೊಡ್ಡ ಕೆರೆಗಳು ಎನಿಸಿಕೊಂಡಿರುವ ಬೇತಮಂಗಲ ಮತ್ತು ರಾಮಸಾಗರ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸುವುದಾಗಿ ಯೋಜನೆಯಲ್ಲಿ ತಿಳಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಯೋಜನೆ ಪ್ರಾರಂಭವಾಗಿದೆ. ಒನ್ನೊಂದು ವರ್ಷದಲ್ಲಿ ಬೇತಮಂಗಲ ಮತ್ತು ರಾಮಸಾಗರ ಕೆರೆಗಳಿಗೆ ನೀರು ಹರಿಸುವುದಾಗಿ ತಿಳಿಸಲಾಗಿತ್ತು. ಇದೀಗ ಇನ್ನೂ ಕುಂಟುತ್ತಲೇ ಹರಿಯುತ್ತಿರುವ ನೀರು ಇಲ್ಲಿಗೆ ಬರುವುದರಲ್ಲಿ ಇನ್ನೆಷ್ಟು ದಿನ ತೆಗೆದುಕೊಳ್ಳುತ್ತದೋ ಎನ್ನುವಂತಾಗಿದೆ.
ಯೋಜನೆಗೆ 2 ಕೆರೆ: ಕೆಜಿಎಫ್ ತಾಲೂಕಿನಲ್ಲಿ ಒಟ್ಟು 460ಕ್ಕೂ ಹೆಚ್ಚು ಕೆರೆಗಳಿವೆಯಾದರೂ ಯೋಜನೆಯಲ್ಲಿ ಸೇರಿಸಿರಿವುದು ಕೇವಲ 2 ಕೆರೆ. ಆ ಪೈಕಿ ಬೇತಮಂಗಲ ಕೆರೆಯನ್ನು ಕುಡಿಯುವ ನೀರಿಗಾಗಿ ಮೀಸಲಿರಿಸಲಾಗಿದೆ. ಜಿಲ್ಲಿಯ ಪ್ರತಿ ತಾಲೂಕಿಗೂ ಕನಿಷ್ಠ 10 ಕೆರೆಗಳನ್ನಾದರೂ ತುಂಬಿಸುವ ಯೋಜನೆಯಲ್ಲಿ ಇಲ್ಲಿಗೆ 2 ಕೆರೆ ಸೇರಿಸಿರುವುದು ತಾಲೂಕಿನ ಬಗ್ಗೆ ಇರುವ ಅಸಡ್ಡೆ ಅಥವಾ ಇಲ್ಲಿ ಯಾರೂ ಕೇಳುವವರೇ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾದಂತಿದೆ.
ಪ್ರಥಮ ಹಂತದ ಪಟ್ಟಿಯಲ್ಲಿ ಇಲ್ಲದ ಅನೇಕ ಹೆಸರುಗಳನ್ನು ನಂತರದ ದಿನಗಳಲ್ಲಿ ಸೇರಿಸಲಾಯಿತಲ್ಲದೆ ಅಂತಹ ಕೆರೆಗಳಿಗೂ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ. ಮತ್ತೊಂದೆಡೆ ರೈತರು ನಾಲೆಗಳಿಂದ ನೇರವಾಗಿ ಹರಿಸಿಕೊಳ್ಳುತ್ತಿರುವುದು. ಇನ್ನೊಂದೆಡೆ ಚೆಕ್ ಡ್ಯಾಂಗಳನ್ನೇ ಒಡೆದು ತಮ್ಮ ವ್ಯಾಪ್ತಿಯ ಕೆರೆಗಳಿಗೂ ಹರಿಸಿಕೊಳ್ಳುವುದು ನಡೆಯುತ್ತಲೇ ಇದೆ.
ಯರಗೋಳ್‌ನಲ್ಲೂ ಅನ್ಯಾಯ: ಯರಗೋಳ್ ಕುಡಿಯುವ ನೀರಿನ ಯೋಜನೆಯಲ್ಲೂ ಮೋಸವಾಗಿದೆ. ಕೇವಲ 15 ಕಿಮೀ ದೂರದ ಕೆಜಿಎಫ್ ನಗರಕ್ಕೆ ಈ ನೀರು ಪೂರೈಕೆ ಮಾಡಲು ಒಪ್ಪದ ಸರ್ಕಾರ ಸುಮಾರು 40 ಕಿಮೀ ದೂರದ ಕೋಲಾರ ಸೇರಿ ಒಟ್ಟು 47 ಗ್ರಾಮಗಳಿಗೆ ನೀರು ನೀಡುವ ಯೋಜನೆ ಸಿದ್ಧಪಡಿಸಿದೆ. ಆದರೆ ಪಕ್ಕದಲ್ಲೇ ಇರುವ ಕೆಜಿಎ್ ನಗರವನ್ನು ಸಂಪೂರ್ಣ ಕಡೆಗಣಿಸಲಾಗಿದೆ.
ಕೆರೆಗಳನ್ನಾದರೂ ಸ್ವಚ್ಛಗೊಳಿಸಿ: ಯೋಜನೆಗಳೆಂದರೆ ಕೇವಲ ಹಣ ಮಾಡುವ ಏಕೈಕ ಮಾರ್ಗ ಎನ್ನುವಂತಾಗಿದ್ದು ಕೆರೆಗಳಿಗೆ ನೀರು ಬಿಡುವ ಮುಂಚೆ ಕನಿಷ್ಠ ಕೆರೆಗಳಲ್ಲಿರುವ ವಿಷ ಪೂರಿತ ಗಿಡಗಂಟಿ ಮತ್ತು ನೂರಾರು ವರ್ಷಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಸ್ವಚ್ಛಗೊಳಿಸಬೇಕು ಎಂದು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಬೇತಮಂಗಲ ಮತ್ತು ರಾಮಸಾಗರ ಕೆರೆ ಅಚ್ಚುಕಟ್ಟು ಪ್ರದೇಶದ ನಾಗರಿಕರು ಒತ್ತಾಯಿಸಿದ್ದಾರೆ.
ಕೆಸಿ ವ್ಯಾಲಿ ಯೋಜನೆಯಿಂದ ನಮ್ಮ ಕ್ಷೆೇತ್ರದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೆ ಬೇತಮಂಗಲ ಮತ್ತು ರಾಮಸಾಗರ ಕೆರೆಗಳಿಗೆ ನೀರು ಹರಿಯಬೇಕಿತ್ತು. ಈ ವರ್ಷ ಮಳೆ ಸರಿಯಾಗಿ ಬಂದರೆ ಆರು ತಿಂಗಳೊಳಗೆ ನೀರು ಬರಲಿದೆ. ಕೆರೆ ಹೂಳು ತೆಗೆಸಲು ಕೆಜಿಎ್ ಬೆಮೆಲ್ ಸಹಕಾರದೊಂದಿಗೆ ಪ್ರಯತ್ನಿಸುತ್ತಿದ್ದೆೇವೆ. ಕೆಸಿ ವ್ಯಾಲಿಯಲ್ಲಿ ನಮಗೆ ಅನ್ಯಾಯವಾಗಿದ್ದರೂ ಮುಂದಿನ ಯೋಜನೆಗಳಲ್ಲಿ ನಮ್ಮ ಪಾಲು ಪಡೆಯುತ್ತೇವೆ. ಎಂ.ರೂಪಕಲಾ, ಕೆಜಿಎ್ ಶಾಸಕಿ