

ಕೋಲಾರ: ಕೆಸಿ ವ್ಯಾಲಿ ನೀರು ಹರಿಯುವ ಕಾಲುವೆ ಇಕ್ಕೆಲಗಳಲ್ಲಿ ಕೊಳವೆಬಾವಿ, ಕೃಷಿ ಹೊಂಡ ತೆರವಿನ ಜತೆಗೆ ಅಕ್ರಮ ನೀರಿನ ಸಂಪರ್ಕ ಪಡೆದಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಕೆಸಿ ವ್ಯಾಲಿ ಯೋಜನೆ ಸಂಬಂಧ ಕರೆದಿದ್ದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಣ್ಣ ನೀರಾವರಿ ಇಲಾಖೆ ಅಚ್ಚುಕಟ್ಟಾಗಿ ಯೋಜನೆ ಅನುಷ್ಠಾನಗೊಳಿಸಿದೆ. ನೀರಿನ ದುರ್ಬಳಕೆ ತಡೆದು ಯೋಜನೆ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ಹರಿಸಬೇಕಿದೆ. ಕೋಲಾರಮ್ಮ ಕೆರೆಗೆ ಎರಡು ತಿಂಗಳಲ್ಲಿ ಹಾಗೂ ಮುಂದಿನ ಮೂರು ತಿಂಗಳಲ್ಲಿ ಮುಳಬಾಗಿಲಿಗೂ ನೀರು ಹರಿಯಲಿದೆ ಎಂದರು.
ಕೆಸಿ ವ್ಯಾಲಿ ನೀರು ಹರಿಯುವ ಮಾರ್ಗಮಧ್ಯೆ ನಿರ್ಮಿಸಿರುವ ಚೆಕ್‌ಡ್ಯಾಂ ಎತ್ತರ ತಗ್ಗಿಸಿ ಎ ಅಡಿಗಳಷ್ಟು ನೀರನ್ನು ಚೆಕ್‌ಡ್ಯಾಂನಲ್ಲೇ ಉಳಿಸಲು ಸೂಚಿಸಲಾಗಿದ್ದು, ಅಂತರ್ಜಲಮಟ್ಟ ಹೆಚ್ಚಳದ ಉದ್ದೇಶವೂ ಇದರಿಂದ ಈಡೇರಿದಂತಾಗುತ್ತದೆ ಎಂದರು.
ಶ್ರೀನಿವಾಸಪುರದಲ್ಲಿ ಮಾವು ಮಾರುಕಟ್ಟೆ ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ನೇರ ಮಾರಾಟದಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತನಿಗೆ ಹೆಚ್ಚಿನ ಲಾಭ ಸಿಗುತ್ತದೆ. ಈ ನಿಟ್ಟಿನಲ್ಲಿ ರೈತರು ಆಸಕ್ತಿ ತೋರಬೇಕು ಎಂದರು.
ಲಾಕ್‌ಡೌನ್ ಸಡಿಲಿಕೆ ನಂತರ ಅಂತಾ ರಾಜ್ಯ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ. ಮೇ 31ರ ನಂತರ ಅದಕ್ಕೂ ಅವಕಾಶ ಸಿಗಬಹುದು. ಮುಂಬರುವ ಎರಡು ಭಾನುವಾರ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ಮದ್ಯದಂಗಡಿಯೂ ಬಂದ್ ಮಾಡಬೇಕೇ ಎಂಬ ಬಗ್ಗೆ ತೀರ್ಮಾನವಾಗಿಲ್ಲ ಎಂದರು.
ಲಾಕ್‌ಡೌನ್ ಸಡಿಲಿಕೆ ನಂತರ ಮೊದಲ ದಿನ ಉತ್ತಮ ವಹಿವಾಟು ನಡೆಸಿ ಉತ್ತಮ ಆದಾಯ ಬಂದಿತ್ತು. ಇದೀಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈಗ ಶೇ.40 ಮದ್ಯದಂಗಡಿ ಮಾತ್ರ ತೆರೆದಿದೆ ಎಂದರು.
ಸಭೆಯಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್, ಶಾಸಕ ಕೆ. ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಡಿಸಿ ಸಿ.ಸತ್ಯಭಾಮ, ಸಿಇಒ ಎಚ್.ವಿ. ದರ್ಶನ್, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸುರೇಶ್‌ಬಾಬು, ಎಇಇ ಕೃಷ್ಣ ಇತರರು ಹಾಜರಿದ್ದರು.
ನನ್ನ ಗಮನಕ್ಕೆ ಬಂದಿರಲಿಲ್ಲ: ಕರೊನಾ ಸೋಂಕಿತರನ್ನು ಜಾಲಪ್ಪ ಆಸ್ಪತ್ರೆಯಿಂದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದಾಗ ಸರ್ಕಾರಿ ಆಸ್ಪತ್ರೆ ಮೊದಲ ಆದ್ಯತೆ ಆಗಿ ತೆಗೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆಯಿಂದ ನಿರ್ದೇಶನ ಬಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ನಾಗೇಶ್ ಹೇಳಿದರು.