ಕೆಸಿ ವ್ಯಾಲಿ ನೀರು ಕಬಳಿಕೆ ಪತ್ತೆ ತಡೆಗೆ ಮಾಜಿ ಸೈನಿಕರ ನಿಯೋಜನೆ

12-klr-11
Published on

ಕೋಲಾರ: ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಅನುಷ್ಠಾನಗೊಂಡಿರುವ ಕೆಸಿ ವ್ಯಾಲಿ ನೀರು ಈಗಾಗಲೇ ಜಿಲ್ಲೆಯ 50ಕ್ಕೂ ಹೆಚ್ಚು ಕೆರೆಗಳಿಗೆ ಹರಿದಿದ್ದು, ಕೃಷಿ ಮತ್ತು ಇನ್ನಿತರ ಯಾವುದೇ ಚಟುವಟಿಕೆಗೆ ಕೆರೆಯ ನೀರನ್ನು ಬಳಕೆ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಅಕ್ರಮ ನಿಲ್ಲದಿರುವುದರಿಂದ ನೀರುಗಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೆಸಿ ವ್ಯಾಲಿ ನೀರನ್ನು ಕೆಲವರು ಪಂಪು-ಮೋಟಾರ್ ಅಳವಡಿಸಿ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಗಮನ ಸೆಳೆದ ಅಧಿಕಾರಿಗಳು ಕ್ರಮ ಕೈಗೊಳ್ಳಲು ನೀರುಗಳ್ಳರು ಬಿಡುತ್ತಿಲ್ಲ. ಕೆಲವು ಕಡೆ ನಮ್ಮ ಸಿಬ್ಬಂದಿ ಮೇಲೆ ದರ್ಪ ತೋರಿ ವಾಪಸ್ ಕಳುಹಿಸಿದ್ದಾರೆಂದು ಅಸಹಾಯಕತೆ ವ್ಯಕ್ತಪಡಿಸಿದರು. ಕೆರೆ ಕಾಯಲು ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ, ಜಿಲ್ಲಾ ಆಡಳಿತ ಪೊಲೀಸ್ ಭದ್ರತೆ ಒದಗಿಸಿದರೂ ನೀರು ಕಳವು ತಡೆಯಲಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಾಜಿ ಸೈನಿಕರ ಬಳಕೆ: ಕೆಸಿ ವ್ಯಾಲಿ ನೀರನ್ನು ಅಂತರ್ಜಲ ಅಭಿವೃದ್ಧಿಗಾಗಿ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಕನಿಷ್ಠ ಒಂದು ವರ್ಷ ನೀರನ್ನು ಉಳಿಸಿಕೊಂಡರೆ ನಿಷ್ಕ್ರಿಯಗೊಂಡಿರುವ ಕೊಳವೆಬಾವಿಗಳು ಪುನಶ್ಛೇತನಗೊಳ್ಳುತ್ತವೆ. ಆದರೆ ಕೆಲವರು ನೀರು ನಮ್ಮ ಸ್ವತ್ತು, ಬಳಸದಂತೆ ಹೇಳಲು ನಿಮಗೆ ಹಕ್ಕಿಲ್ಲ ಎಂದು ಜಗಳಕ್ಕೆ ಬರುತ್ತಾರೆ. ಸ್ಥಳೀಯರ ಜತೆ ಸಂಘರ್ಷ ಮಾಡಿಕೊಳ್ಳುವುದು ಕಷ್ಟದ ಕೆಲಸ, ನೀರು ತಡೆಯಲು ಮಾಜಿ ಸೈನಿಕರನ್ನು ಮಾರ್ಷಲ್‌ಗಳಾಗಿ ನೇಮಿಸಿಕೊಳ್ಳುವುದು ಸೂಕ್ತವೆಂಬ ಅಧಿಕಾರಿಗಳ ಸಲಹೆಗೆ ಸಚಿವ ನಾಗೇಶ್ ಸಮ್ಮತಿಸಿದರು.

ಕೆಸಿ ವ್ಯಾಲಿ ನೀರನ್ನು 147 ಕಡೆ ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ, ಕೆರೆ ಬದುವಿನಿಂದ ಪೈಪ್ ಅಳವಡಿಸಿ ನೀರು ತೆಗೆಯಲಾಗುತ್ತಿದೆ. ಕೆಲವರು ಹೆಚ್ಚಿನ ಸಾಮರ್ಥ್ಯದ ಮೋಟಾರ್ ಬಳಸುತ್ತಿದ್ದರೆ, ಇನ್ನು ಕೆಲವರು ಕೈ ಬೋರ್‌ವೆಲ್ ಬಳಸಿ ನೀರು ಸಂಗ್ರಹಿಸುತ್ತಿರುವುದರಿಂದ ಕೋಟ್ಯಂತರ ರೂ. ಖರ್ಚು ಮಾಡಿ ಅನುಷ್ಠಾನಕ್ಕೆ ತಂದಿರುವ ಯೋಜನೆ ವ್ಯರ್ಥವಾಗಬಹುದೆಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಸಭೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಪ್ರಧಾನ ಇಂಜಿನಿಯರ್ ಎಚ್.ಎಲ್.ಪ್ರಸನ್ನ, ಕೋಲಾರ ಜಿಲ್ಲಾ ಕಾರ್ಯಪಾಲಕ ಅಭಿಯಂತ ಸುರೇಶ್‌ಕುಮಾರ್, ಕೋಲಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹಾಗೂ ಸಣ್ಣ ನೀರಾವರಿ ಇಲಾಖೆ ಕೋಲಾರ ಜಿಲ್ಲೆಯ ಎಇಇ ಕೃಷ್ಣ ಇನ್ನಿತರರು ಭಾಗವಹಿಸಿದ್ದರು.

ರೈತರಿಗೆ ಅರಿವು ಮೂಡಿಸಿ: ರೈತರು ಕಷ್ಟದಲ್ಲಿದ್ದಾರೆ, ಕೆರೆ ನೀರು ಬಳಸುವುದು ತಪ್ಪು. ಆದರೂ ಮಾನವಿಯತೆ ದೃಷ್ಟಿಯಿಂದ ಕೇಸು ಹಾಕೋದು ಬೇಡ, ಪರಿಣಾಾಮಕಾರಿಯಾಗಿ ಅರಿವು ಮೂಡಿಸಿ ಎಂದು ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net