ಬಂಗಾರಪೇಟೆ, ಮಾಲೂರು ತಾಲೂಕು ಕೆರೆ-ಕುಂಟೆಗೆ ಹರಿಯದ ಕೆಸಿ ವ್ಯಾಲಿ ನೀರು

22 budukote 02
Published on

ಬೂದಿಕೋಟೆ: ಕೋಲಾರ ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಮಟ್ಟ ವೃದ್ಧಿಸಲು ಸರ್ಕಾರ ಜಾರಿಗೆ ತಂದಿರುವ ಕೆಸಿ ವ್ಯಾಲಿ ಯೋಜನೆಯಿಂದ ಬಂಗಾರಪೇಟೆ, ಮಾಲೂರು ತಾಲೂಕಿನ ಕೆರೆಗಳಿಗೆ ನೀರು ಹರಿಯದೆ ಕೆರೆ-ಕುಂಟೆ ಬತ್ತಿದ್ದು, ಜನ ಜಾನುವಾರುಗಳಿಗೆ ನೀರು ಸಿಗದಂತಾಗಿದೆ.

ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ಕೆರೆಗಳಿಗೆ ಹರಿಸಲು ಸರ್ಕಾರ 1,400 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿತ್ತು. ಅದರಂತೆ ಲಕ್ಷ್ಮೀಸಾಗರ, ನರಸಾಪುರ, ಶಿವಾರಪಟ್ಟಣದ ಕೆರೆ ಸೇರಿ 40 ಕೆರೆಗಳಿಗೆ ಈಗಾಗಲೆ ನೀರು ಹರಿಸಲಾಗಿದೆ. ಯೋಜನೆ ಪ್ರಕಾರ ಮಾಲೂರಿನ ಶಿವಾರಪಟ್ಟಣ, ಹುಂಗೇನಹಳ್ಳಿ, ಚಿಕ್ಕಸಾಬೆನಹಳ್ಳಿ, ದೊಡ್ಡ ಶಿವಾರ ಅಮ್ಮಣಿ, ಅರಳೇರಿ ಕೆರೆ ಸೇರಿ ಒಟ್ಟು 24 ಕೆರೆ ತುಂಬಬೇಕಿತ್ತು. ಆದರೆ ಇದುವರೆಗೂ 8 ಕೆರೆ ಮಾತ್ರ ತುಂಬಿದ್ದು, ಬಂಗಾರಪೇಟೆ ತಾಲೂಕಿನ ಹಂಚಾಳ, ಮಾದಮಂಗಲ, ಬಂಗಾರಪೇಟೆ ದೊಡ್ಡಕೆರೆ, ಕಾಮಸಮುದ್ರಂ, ಮಾರ್ಕಂಡೇಯ, ರಾಮಚಂದ್ರರಾಯರ ಕೆರೆ ಸೇರಿ ಒಟ್ಟು 8 ಕೆರೆಗಳಿಗೆ ನೀರು ಹರಿಯದೆ ಈ ಭಾಗದಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕೆರೆ-ಕುಂಟೆಗಳು ಬತ್ತಿವೆ. ಇದರಿಂದ ಕೊಳವೆ ಬಾವಿಗಳಲ್ಲಿ ನೀರು ಸಿಗದೆ ಪರಿತಪಿಸುವಂತಾಗಿದೆ. 2019ರ ಸೆಪ್ಟಂಬರ್ 4ರಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ ರೈತರೊಂದಿಗೆ ಶಿವಾರಪಟ್ಟಣದ ಪಂಪ್ ಹೌಸ್‌ಗೆ ಭೇಟಿ ನೀಡಿ ಮಾರ್ಕಂಡೇಯ ಮತ್ತು ಹಂಚಾಳ ಮಾರ್ಗದ ಕೆರೆಗಳಿಗೆ 2 ತಿಂಗಳಲ್ಲಿ ಕೆಸಿ ವ್ಯಾಲಿ ನೀರು ಹರಿಸುವ ಭರವಸೆ ನೀಡಿ 5 ತಿಂಗಳಾದರೂ ನೀರು ಹರಿದಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳಿಗೆ ಬರಬೇಕಾದ 60 ಎಂಎಲ್‌ಡಿ ನೀರು ಬಂದಿಲ್ಲ ಎನ್ನುವ ಉತ್ತರ ಕೇಳಿ ಬರುತ್ತಿದೆ.

ಇದು ಹೀಗೆ ಮುಂದುವರಿದರೆ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾಲೂರು ಮತ್ತು ಬಂಗಾರಪೇಟೆ ತಾಲೂಕಿಗೆ ಅನ್ಯಾಯವಾಗುತ್ತಿದೆ. ಈಗಾಗಲೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗಿದೆ. ಸದ್ಯದಲ್ಲೇ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಜತೆಗೂಡಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು. ನಂಜೇಗೌಡ, ಶಾಸಕ ಮಾಲೂರು ಬೆಂಗಳೂರಿನಲ್ಲಿ ಜನರು ಬಳಸುವ ನೀರಿನ ಆಧಾರದ ಮೇಲೆ ನಮಗೆ ನೀರು ಸಿಗುತ್ತಿದ್ದು, ಈಗ 260 ಎಂಎಲ್‌ಡಿ ಮಾತ್ರ ಬರುತ್ತಿದೆ. ಭೂಮಿ ಅಧಿಕವಾಗಿ ನೀರು ಹೀರಿಕೊಳ್ಳುತ್ತಿದ್ದು, ಕೆರೆ ಭರ್ತಿಯಾಗಲು ಸಮಯ ತೆಗೆದುಕೊಳ್ಳುತ್ತಿದೆ. 15 ದಿನಗಳ ಒಳಗಾಗಿ ಬಂಗಾರಪೇಟೆ ತಾಲೂಕಿನ ಕೆರೆಗಳಿಗೆ ನೀರು ಹರಿಯಲಿದೆ. ಎಂ.ಕೃಷ್ಣ, ಎಇಇ ಸಣ್ಣ ನೀರಾವರಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net